ಶನಿವಾರ, ಡಿಸೆಂಬರ್ 28, 2013

ಇನ್ನೂ ಇದೆ ಪಯಣ - ನೆಲ್ಸನ್ ಮಂಡೇಲಾ



ಆ ಸುಧೀರ್ಘ ಮತ್ತು ಏಕಾಂತದ ದಿನಗಳಲ್ಲೇ ನನ್ನ ಜನರಿಗಾಗಿ ನಾನು ಹೊಂದಿದ್ದ ಸ್ವಾತಂತ್ರ್ಯದ ಹಸಿವು ಎಲ್ಲರ ಪಾಲಿನ ಸ್ವಾತಂತ್ರ್ಯದ ಹಸಿವಾಗಿ ಬೆಳೆದದ್ದು.

ತುಳಿತಕ್ಕೊಳಗಾದವನಂತೆಯೇ, ತುಳಿಯುವವನು ಮುಕ್ತನಾಗಬೇಕು ಎಂಬುದು ನನ್ನ ಅಭಿಪ್ರಾಯ. ಇನ್ನೊಬ್ಬರ ಸ್ವಾತಂತ್ರ್ಯವನ್ನು ಅಪಹರಿಸುವವನು ಸ್ವತಃ ತಾನೇ ದ್ವೇಷದ ಬಂಧಿ. ಆತ ಪೂರ್ವಾಗ್ರಹ ಮತ್ತು ಸಣ್ಣ ಮನಸ್ಸಿನ ಪಂಜರದ ಸರಳುಗಳ ಹಿಂದಿದ್ದಾನೆ. ನನ್ನ ಸ್ವಾತಂತ್ರ್ಯವನ್ನು ಇನ್ನೊಬ್ಬರು ಒಯ್ದಾಗ ನಾನು ಹೇಗೆ ಮುಕ್ತನಲ್ಲವೋ ಕದ್ದಾಗ ಕೂಡ. ಶೋಷಕ ಮತ್ತು ಶೋಷಿತರಿಬ್ಬರೂ ಮಾನವೀಯತೆಯಿಂದ ವಂಚಿತರು.

ಜೈಲಿನಿಂದ ಹೊರಬಿದ್ದಾಗ, ಇಬ್ಬರ ಬಿಡುಗಡೆಯನ್ನೂ ಸಾಧಿಸುವುದು ನನ್ನ ಗುರಿಯಾಗಿತ್ತು. ಅದು ಈಡೇರಿದೆ ಎಂದು ಕೆಲವರು ಹೇಳಬಹುದು. ಆದರೆ ಅದು ಸತ್ಯವಲ್ಲ. ನಾವಿನ್ನೂ ಮುಕ್ತರಲ್ಲ. ಮುಕ್ತರಾಗಿಲ್ಲ. ಮುಕ್ತರಾಗುವ ಹಕ್ಕನ್ನಷ್ಟೆ ಪಡೆದುಕೊಂಡಿದ್ದೇವೆ. ಅಂತಿಮ ಹೆಜ್ಜೆಯನ್ನು ನಾವು ಇಟ್ಟಿಲ್ಲ. ಆ ಸುಧೀರ್ಘ ಹಾಗೂ ಕಷ್ಟಕರ ಪಯಣದ ಮೊದಲ ಹೆಜ್ಜೆಯನ್ನಷ್ಟೆ ಇಟ್ಟಿದ್ದೇವೆ.

ಮುಕ್ತರಾಗುವುದೆಂದರೆ ಸರಪಳಿಗಳನ್ನು ಕತ್ತರಿಸುವುದಷ್ಟೆ ಅಲ್ಲ. ಇನ್ನೊಬ್ಬನ ಸ್ವಾತಂತ್ರ್ಯವನ್ನು ಗೌರವಿಸುವುದೂ ಕೂಡ.

ನಾನು ಆ ಬಿಡುಗಡೆಯ ಸುದೀರ್ಘ ಯಾನವನ್ನು ಕೈಗೊಂಡಿದ್ದೇನೆ. ತಪ್ಪು ಮಾಡದಂತೆ ಪ್ರಯತ್ನಿಸಿದ್ದೇನೆ. ತಪ್ಪು ಮಾಡಿದ್ದೇನೆ. ಬೆಟ್ಟ ಏರಿದವನಿಗೆ ಗೊತ್ತಾಗುತ್ತದೆ ಇದಕ್ಕಿಂತ ದೊಡ್ಡ ಕ್ಲಿಷ್ಟ ಪರ್ವತಗಳಿವೆ.

ನಾನಿಲ್ಲಿ ಒಂದು ಘಳಿಗೆ ವಿಶ್ರಾಂತಿ ಪಡೆಯುತ್ತೇನೆ. ಅದು ನನ್ನೆದುರಿರುವ ದಿವ್ಯ ಸೌಂದರ್ಯವನ್ನು ವೀಕ್ಷಿಸಲು, ಸಾಗಿ ಬಂದ ದಾರಿಯನ್ನೊಮ್ಮೆ ಅವಲೋಕಿಸಲು, ಆದರೆ ಅದು ಕ್ಷಣಕಾಲವಷ್ಟೇ. ಯಾಕೆಂದರೆ ಸ್ವಾತಂತ್ರ್ಯದ ಜೊತೆಗೆ ಹೊಣೆಗಾರಿಕೆಗಳೂ ಬರುತ್ತವೆ.

ನನ್ನ ಪಯಣ ಇನ್ನೂ ಮುಗಿದಿಲ್ಲ……..