ಭಾನುವಾರ, ಜೂನ್ 10, 2012

ಉಳಿದ ಸಾಲು - ಜಯಂತ್ ಕಾಯ್ಕಿಣಿ



ಕನಸಿನಲ್ಲಿ  ಕಂಡ  ಸಮುದ್ರ 
ಕಣ್ಣಿನಲ್ಲೇ  ಉಳಿಯಿತು 
ಹೇಳ  ಹೋದರೆ  ನಂಬುವುದಿಲ್ಲ  ಯಾರೂ 

ಹಳೆ  ಡೈರಿಯಲ್ಲಿರುವ ಮುಕ್ಕಾಲು  ಪಾಲು 
ನಂಬರು  ಚಾಲ್ತಿಯಲ್ಲಿಲ್ಲ 
ಎಲ್ಲೋ  ಖಾಲಿ  ಮನೆಗಳಲ್ಲಿ  ಒಂಟಿ  ಫೋನುಗಳು 
ಭಯಾನಕವಾಗಿ  ರಿಂಗಿಣಿಸುವಾಗ  , ಇನ್ನೆಲ್ಲೋ 
ನಡಗುವ ಕೈಗಳಲ್ಲಿ  ಆಪರೇಷನ್   ಥಿಯೇಟರ್ 
ಫಾರ್ಮಿಗೆ  ಇನ್ನ್ಯಾರೋ    ಸಹಿ  ಮಾಡುತ್ತಿದ್ದಾರೆ 

ಸೇತುವೆಗಳು  ಮೂಡುವ  ಮುನ್ನ 
ನದಿಯ  ಎರಡೂ  ತಡಿಯಲ್ಲಿ  ಜನ 
ತಾರಿ ದೋಣಿಗಾಗಿ  ತಂಪಾಗಿ  ಕಾಯುತ್ತಿದ್ದರು  ಪ್ರಸನ್ನತೆಯಿಂದ 
ಅನುಮಾನದ  ರುಚಿ  ಹಚ್ಚಿಸಿಕೊಂಡ  ದೇವರು 
ಮಾರುವೇಷದಲ್ಲಿ  ಮದ್ಯಾಹ್ನ  ಬಸ್  ಸ್ಟ್ಯಾಂಡಿನಲ್ಲಿ 
ಸೀಟು  ಹಿಡಿಯಲು  ಕಿಟಕಿಯಿಂದ  
ಗೋಗರೆಯುತ್ತ  ಕರ್ಚೀಫು  ಎಸೆಯುತ್ತಿದ್ದಾನೆ 

ಹಣ್ಣಿನಂಗಡಿಯ ಹಳೆ  ಕನ್ನಡಿಯಲ್ಲಿ 
ಸಾವಿರಾರು  ಬಸ್ಸುಗಳು  ಹೊಕ್ಕು  ಹೊರಬಂದಿವೆ 
ಕೊನೆಯ  ಬಸ್ಸು  ಹೋದ  ಮೇಲೂ  ಇನ್ನೂ  ಏನೋ 
ಪವಾಡ  ಜರುಗಲಿದೆ   ಎಂಬಂತೆ ಬೆಂಚಿನಲ್ಲಿ 
ಕೂತಿರುವ  ಳೆಗಡ್ಡದ  ಪೋರ  ಕಣ್ಣಲ್ಲೊಂದು 
ಉಜ್ವಲ   ಶೂನ್ಯವನ್ನು  ಹಿಡಿದುಕೊಂಡು  ನೋಡುತ್ತಿದ್ದಾನೆ 
  
ನೀವು  ನನಗೆ  ನಾಳೆ  ಹೇಳಲಿರುವುದು  ನನಗೆ 
ನಿನ್ನೆಯೇ  ಹೊಳೆದು   ಹೋಗಿದೆ  ಎಂಬಂತೆ 
ನಿಮ್ಮ  ಅರ್ಧ  ಮರ್ಧ  ಮಾತು  ಕವಿತೆಗಳನ್ನು 
ಪೂರ್ತಿ  ಮಾಡಿಕೊಡುತ್ತೇನೆ  … ಟ್ರೈ  ಮಾಡಿ ..
ಇಷ್ಟವಾಗದಿದ್ದರೆ  ಸಾಲು  ವಾಪಸ್ … ಎನ್ನುತ್ತಾನೆ 
ಗೊತ್ತು  ನೀವು  ನಂಬುತ್ತಿಲ್ಲ  ಎನ್ನುವಂತೆ  ನಗುತ್ತಾನೆ 

ನಿಗೂಢ  ನಿಲ್ದಾಣಕ್ಕೆ  ಒಯ್ಯಲಿರುವ  ಚಾಲಕನಿಲ್ಲದ 
ಬಸ್ಸಿನಂತೆ  ಇರುಳು  ನಮ್ಮಿಬ್ಬರ  ಮೇಲೂ 
ಏಕ  ಕಾಲಕ್ಕೆ  ಹಾಯುತ್ತಿದೆ