ಗುರುವಾರ, ಏಪ್ರಿಲ್ 26, 2012

ಶಿವರಾಂ ಕಾರಂತ್ - ಮೂಕಜ್ಜಿಯ ಕನಸುಗಳು



ಭೂಮಿಯಲ್ಲಿ   ಹುಟ್ಟಿದ  ಎಲ್ಲರೂ   ಒಟ್ಟುಗೂಡಿ  ಒಂದು  ದೇವರನ್ನು  ಮಾಡಿಕೊಂಡಿದ್ದಾರೆ.  ಅವನೇನು  ಮಾಡುತ್ತಿದ್ದಾನೋ? ಯಾರ್ಯಾರು  ನನ್ನನ್ನು  ನಂಬುತ್ತಿದ್ದಾರೆ, ಯಾರ್ಯಾರು  ನಂಬುವುದಿಲ್ಲ  ಎಂದು ಹುಡುಕಿ  ಹೋಗಲಾರ .  ಅವನ  ಚಿಂತೆಯೇ  ಇಲ್ಲದ   ಪ್ರಾಣಿಗಳಿಲ್ಲವೋ? ಅವುಗಳನ್ನೂ ಬದುಕಿಸಿ ಇರಿಸಿದ್ದಾನಲ್ಲ . ಅವನನ್ನು ತಿಳಿಯಬೇಕಾದರೆ ನಾವು  ಅವನನ್ನು  ಹುಡುಕಿದ  ಹಾಗೆ  ಅವನೂ  ನಮ್ಮನ್ನು ಹುಡುಕಿಕೊಂಡು  ಬರಬೇಕಾದುದು  ಇಲ್ಲ . ನಾವೇ  ಅವನಲ್ಲಿ  ಪ್ರಶ್ನೆ   ಕೇಳುತ್ತೇವೆ. ನಾವೇ  ಅವಕ್ಕೆ ಉತ್ತರವನ್ನು  ಹೇಳಿಕೊಳ್ಳುತ್ತೇವೆ. ನಮಗೆ  ಇಷ್ಟ  ಕಂಡಂತೆ  ನಡೆದಾಗ  ದೇವರ  ಇಚ್ಛೆ   ಅನ್ನುತ್ತೇವೆ .  ಅನಿಷ್ಟ  ಪ್ರಾಪ್ತಿಸಿದಾಗ  ಅನಿಷ್ಟ  ಎನ್ನುತ್ತೇವೆ.

ಹೆಂಡತಿ  ಮಕ್ಕಳನ್ನು  ಬಿಟ್ಟರು  ದಾಸರು. ವಿಠಲನನ್ನು, ನಾರಾಯಣನನ್ನು  ನಂಬಿ  ಹಾಡಿದರು. ನಂಬಿದ್ದೆ  ನಂಬಿದ್ದು  ಹಾಡಿದ್ದೆ  ಹಾಡಿದ್ದು . ಅವರು  ತಮ್ಮ  ಹೆಂಡಿರನ್ನು  ದಾರಿ  ಮೇಲೆ  ಕೆಡೆದು ಹೋದದ್ದು ನಿಜ  . ಹಾಗೆ ಮಾಡಿ  ಬೇಡಿದ್ದು   ಯಾರನ್ನು? ತಂತಮ್ಮ  ಹೆಂಡಿರೊಡನೆ  ಸುಖವಾಗಿ  ವೈಕುಂಠದಲ್ಲೋ, ಕೈಲಾಸದಲ್ಲೋ  ಇರುವಂಥ  ವಿಷ್ಣುವನ್ನು , ಶಿವನನ್ನು. ಅವರೇನು ಕೊಟ್ಟಾರು? ಅವರಿಗೂ  ಅವರ   ಹೆಂಡಂದಿರಿಂದ  ಮುಕ್ತಿ   ಸಿಗದೇ  ಇರುವಾಗ ?

ಅರ್ಜುನನಿಗೆ  ಕೃಷ್ಣ   ಪರಮಾತ್ಮ  ಅಷ್ಟು   ದೊಡ್ಡ   ಭಗವದ್ಗೀತೆ  ಹೇಳಿದ   ಅನ್ನುತ್ತಾರೆ ; ಹೇಳಿದ್ದೆಲ್ಲಿ ? ಕುರುಕ್ಷೇತ್ರದಲ್ಲಿ ; ಧರ್ಮರಾಜ , ಕೌರವ  ಯುಯುಧಾನ, ಸಾತ್ಯಕಿಗಳು  ಅವರವರ ಶಂಖಗಳನ್ನು  ಅವರವರು  ಊದಿದ  ಮೇಲೆ  ಇನ್ನೇನು ? ಯುಧ್ಧ ತೊಡಗಿತು  ಅನ್ನುವಾಗ   ಅಲ್ಲಿ   ಕೃಷ್ಣ    ಮೂರು  ದಿನಗಳ  ಹರಿಕಥೆಯನ್ನು  ಒಬ್ಬ  ಅರ್ಜುನನ  ಮುಂದೆ  ನಡೆಸಿದ . ಅಂದರೆ  ಆಗ  ಉಳಿದವರೆಲ್ಲರೂ  ಏನು  ಮಾಡಿದರೋ ? ಯುಧ್ಧವನ್ನು  ಬಿಟ್ಟು  ಮನೆಗೆ  ಹೋಗಿ, ತಿರುಗಿ  ಅಲ್ಲೆಗೆ  ಬಂದರೋ ?

ಆತ್ಮಕ್ಕೆ  ಸಾವಿಲ್ಲ ’ ಅಂದಿದ್ದ  ಕೃಷ್ಣ    ‘ಅದೇನೇ  ನಿಜ .   ದೇಹವಲ್ಲ ’ ಅಂದ   .
ನೀನು  ಕೊಲ್ಲುವುದಲ್ಲ , ಮಾಡುವುದಲ್ಲ ’ ಅಂದ .
 ಇದೆಲ್ಲ  ಲೆಕ್ಕಾಚಾರ  ಸಮವೇ.

 ‘ನೀನು  ನಿನ್ನ  ಕರ್ಮ  ಮಾಡು  ; ಅದರ  ಫಲವನ್ನು  ಅಪೇಕ್ಷಿಸಬೇಡ ’ ಅಂದ .
 ನೀನು  ಯುಧ್ಧದಲ್ಲಿ  ಕೊಂದರೆ, ಸತ್ತರೆ  ನಿನಗೆ  ಸ್ವರ್ಗ  ಪ್ರಾಪ್ತಿಯಾಗುತ್ತದೆ  ‘ ಅಂದ  ಅವನೇ .
ಸ್ವರ್ಗದ  ಅಪೇಕ್ಷೆ  ಮಾಡುವುದು  ತಪ್ಪು' ಎಂದದ್ದೂ  ಅವನೇನೇ .

ಕಾಮ  -ಕ್ರೋಧಗಳು  ಕೆಟ್ಟದ್ದು ’ ಎಂದವನು  ಅವನೇ ; ‘ಕೋಪಕ್ಕೆ  ಬಲಿಯಾಗಿ  ಬಾಣಬಿಡುಎಂದವ  ಅವನೇ .

ದೇಹ  ಮುಖ್ಯವಲ್ಲ ’ ಅಂದವನೂ ಅವನೇ ; ‘ಕೌರವರ  ದೇಹವನ್ನು  ಕೊಲ್ಲು  ‘ ಎಂದವ  ಅವನೇ .

ಆತ್ಮಕ್ಕೆ  ಕಳಂಕವಿಲ್ಲ  ’ ಎಂದವನೂ  ಅವನೇ  ; ‘ನೀನು  ಯುಧ್ಧ  ಮಾಡದೆ  ಬಿಟ್ಟರೆ  ನಿನ್ನ  ಕುಲಕ್ಕೆ  ಅಪಕೀರ್ತಿ  ಬರುತ್ತದೆ ’ ಎಂದವ  ಅವನೇ .

ಒಂದೇ   ಗಂಟಲಲ್ಲಿ   ಇವನ್ನೆಲ್ಲ   ನುಂಗುವುದು   ತುಂಬ  ಕಷ್ಟವಲ್ಲವೇ?
ಅವು  ಮಾತಿನ  ಚಮತ್ಕಾರಗಳೆನೋ ಹೌದು . ಅದರಲ್ಲಿ  ನಂಬಿಕೆ  ಹುಟ್ಟುವುದಿಲ್ಲ  ನನಗೆ .



ದೇವರು (?) ಕೊಟ್ಟ  ಆಯುಷ್ಯವನ್ನು  ಇದ್ದಷ್ಟು  ಕಾಲ  ಉಳಿದ  ಮಕ್ಕಳ  ಜೊತೆ  ಬಾಳಿ  ಬದುಕುವುದೇ  ಪೂಜೆ  ಎಂಬ  ಬುಧ್ಧಿ  ಯಾಕೆ  ಬರಬಾರದು  ನಮಗೆ ?