ಗುರುವಾರ, ನವೆಂಬರ್ 1, 2012

ಕನ್ನಡ ತಾಯಿಯ ಸುಪ್ರಭಾತ - ಚಂದ್ರಶೇಖರ ಕಂಬಾರ




ಮುಂಗೋಳಿ ಕುಗ್ಯಾವು ಮೂಡಣ ಬೆಳಗಿ
ತಂಗಾಳಿ ಬೀಸ್ಯಾವು ತವರೀ ಹೂವರಳಿ
ಹೂ ಹೂವಿನೊಳಗೊಂದು ಕೈಲಾಸವರಳ್ಯಾವು
ಕೈಲಾಸ ಕೈ ಮುಗಿದು ಭೂ ಲೋಕಕಿಳಿದಾವು
ಸಾವಿರದ ಶರಣವ್ವ ಕನ್ನಡದ ತಾಯೇ

ಸೂಸು ನಗೆಯಲಿ ಜಗದ ಲೇಸ ತುಳುಕಿಸುವವಳೆ
ಕಲ್ಲಿನ ಎದೆಯೊಳಗೆ ಹುಲ್ಲು ಚಿಗುರಿಸುವವಳೆ
ಹಕ್ಕಿ ಹಾರ್ಯಾಡ್ಯಾವು ಹಾಡೂತ, ಏನಂತ?
ಉಧೊ ನಿನ್ನ ಪಾದಕ್ಕೆ ಆದಿ ಮೂರುತಿಯೇ
ಸಾವಿರದ ಶರಣವ್ವ ಕನ್ನಡದ ತಾಯೇ

ಪಡುಗಡಲ ತೆರೆಗಳಲಿ ಪಾದ ತೊಳೆವವಳೆ
ಬೆಟ್ಟ ಬಯಲಿನ ಹಸಿರ ತೊಟ್ಟು ನಿಂತವಳೆ
ಮಲೆನಾಡ ಶಿಖರದಲಿ ಮಳೆಬಿಲ್ಲ ಮುಡಿದವಳೆ
ಅವ್ವಾ ಅಂದಾಗೊಮ್ಮೆ ಸಾಕಾರಗೊಂಬವಳೆ
ನಗುಮೊಗದ ಜಗದಂಬೆ ಬೆಳಕಿನ ತಾಯೇ

ಕುರಿತು ಓದದ ಕಾವ್ಯ ಪರಿಣತರ ಮಾತೆ
ಸಂತರ ಶರಣರ ಮಂತ್ರದ ಮಾತೆ
ಶಬ್ದಕ್ಕ ಬೆಳಕನ್ನ ಮುಡಿಸುವ ಕವಿಗಣ
ದಿನಬೆಳಗು ಹೊಗಳುವರು ನಿನ್ನ ಕೀರ್ತಿಯನೆ
ಸಾವಿರದ ಶರಣವ್ವ ಕನ್ನಡದ ತಾಯೇ

ಜಾಣ ಜಾಣೆಯರೆದೆಗೆ ಕನಸು ಕೊಡುವವಳೆ
ಬಾಗಿದವರಿಗೆ ಭಾಗ ಹೃದಯ ಕೊಡುವವಳೆ
ನಿನ್ಹಾಂಗ ಧರ್ಮದಲಿ ಧಾರಾಳತನದಲ್ಲಿ
ಇನ್ನೊಬ್ಬರನು ಕಾಣೆ ಧರೆಗೆ ದೊಡ್ಡವಳೆ
ಸಾವಿರದ ಶರಣವ್ವ ಕನ್ನಡದ ತಾಯೇ

 ಮ್ಯಾಲೇಳು ಲೋಕಕ್ಕ ಕೀಳೇಲು ಲೋಕಕ್ಕ
ಅಧಿಕವಾಗಲಿ ಹಬ್ಬಿ ನಿನ್ನ ಕಾರಣಿಕ
ಹಾಲೊಕ್ಕಲಾಗಲಿ ಹೊನ್ನೊಕ್ಕಲಾಗಲಿ
ತೂಗು ತೊಟ್ಟಿಲ ಬೆಳ್ಳಿ ಬಟ್ಟಲದ ತಾಯೇ
ಸಾವಿರದ ಶರಣವ್ವ ಕನ್ನಡದ ತಾಯೇ

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ