ಮಂಗಳವಾರ, ಸೆಪ್ಟೆಂಬರ್ 11, 2012

ಜೋಗಿ



        ಮನಸ್ಸೆಂಬ ಸಮುದ್ರ ಬೇಡದ ಯೋಚನೆಗಳನ್ನು ಬುದ್ಧಿ ತೀರಕ್ಕೆ ತಂದು ಎಸೆಯುತ್ತದೆ. ಹಿಂತಿರುಗಿ ನೋಡಿದರೆ ರಸಹೀನ ಕಬ್ಬಿನ ಜಲ್ಲೆಯಂತೆ ನಿನ್ನೆಗಳ ರಾಶಿ. ಮುಂದಕ್ಕೆ ನೋಡಿದರೆ ಚಾಚಿಕೊಂಡ ಮೂರು ದಾರಿಗಳು. ಬದುಕು ಒಡಂಬಡಿಕೆಯಲ್ಲಿದೆಯೋ, ಈಡೇರಿಕೆಯಲ್ಲಿದೆಯೋ ಎಂಬ ದ್ವಂದ್ವ ನಮ್ಮದು. ಬದುಕಿಗೆ ಉದ್ದೇಶಗಳೇ ಇಲ್ಲ. ಜೀವಮಾನ ಪೂರ್ತಿ ಕ್ಷಣಕ್ಕೋಸ್ಕರ ಕಾಯುತ್ತಿದ್ದೆ ಅನ್ನಿಸುವಂತ ಕ್ಷಣವೊಂದು ಥಟ್ಟನೆ ಹಾಜರಾಗಿ ಬಿಟ್ಟರೆ ಅಲ್ಲಿಗೆ ಮುಕ್ತಿ. ಜ್ಞಾನೋದಯ ಆಗುವತನಕ ಮಾತ್ರ ಹುಡುಕಾಟ ಒಮ್ಮೆ ಅರಿವು ಬೆಳಕಾದರೆ ಆಮೇಲೆ ಅರಿವೇ ಇರುವುದಿಲ್ಲ.

            ಸಂತೋಷವೇ ಬೇರೆ ರೋಚಕತೆಯೇ ಬೇರೆ. ಸಮೂಹದಲ್ಲಿ ಸವಿಯಬಹುದಾದದ್ದು ರೋಚಕತೆ, ಸಂಭ್ರಮ. ಏಕಾಂತದಲ್ಲಿ ಸವಿಯ ಬಹುದಾದದ್ದು ಖುಷಿ.

ಹತ್ತಿರವಾದದ್ದು ನೀರಸವೂ, ದೂರದಲ್ಲಿದ್ದುದು ಆಕರ್ಷಣೆಯೂ ಆಗಿ ಕಾಣುತ್ತದೆ.

          ಸಾವು ಯಾವತ್ತಿದ್ದರೂ ಭಯ ಮತ್ತು ಆಕರ್ಷಣೆ. ಬದುಕು ನಮ್ಮ ಜೊತೆಗಿದ್ದರೂ ಅಪರಿಚಿತ. ನಮಗೆ ನಮ್ಮ ಸತ್ತ-ಬದುಕಷ್ಟೆ ಗೊತ್ತು. ಅಂದರೆ ನಿನ್ನೆಗಳು ಗೊತ್ತು. ಬದುಕುವ ಕ್ಷಣದ ಬಗ್ಗೆ ಗೊತ್ತಿಲ್ಲ. 


ಇಡಿಯಾಗಿದಕ್ಕಿದ್ದು ಯಾವುದೂ ನಮ್ಮದಲ್ಲ.
  ದಕ್ಕುವ ತನಕದ ಹೋರಾಟವೇ ಬದುಕು
      ಜೀವಿಸಿದರೆ ಮಾತ್ರವೇ ಜೀವನ.