ಶನಿವಾರ, ಮಾರ್ಚ್ 31, 2012

ಅವ್ವ - ಪಿ. ಲಂಕೇಶ್.



ನನ್ನವ್ವ ಫಲವತ್ತಾದ ಕಪ್ಪು ನೆಲ 
ಅಲ್ಲಿ ಹಸಿರು ಪತ್ರದ ಹರವು, ಬಿಳಿಯ ಹೂ ಹಬ್ಬ;
ಸುಟ್ಟಷ್ಟು ಕಸವು, ನೊಂದಷ್ಟು ಹೂ ಹಣ್ಣು
ಮಕ್ಕಳೊದ್ದರೆ ಅವಳ ಅಂಗಾಂಗ ಪುಳಕ  
ಹೊತ್ತ ಬುಟ್ಟಿಯ ಇಟ್ಟು ನರಳಿ 
ಎವೆ ಮುಚ್ಚಿದಳು, ತೆರೆಯದಂತೆ.


ಪಲ್ಲ ಜೋಳವ ಎತ್ತಿ ಅಪ್ಪನ್ನ  ಮೆಚ್ಚಿಸಿ ತೋಳ ಬಂದಿಯ ಗೆದ್ದು ,
ಹೆಂಟೆಗೊಂದು ಮೊಗೆ ನೀರು ಹಿಗ್ಗಿ;
ಮೆಣಸು, ಅವರೆ, ಜೋಳ, ತೊಗರಿಯ ಹೊಲವ ಕೈಯಲ್ಲಿ ಉತ್ತು
ಹೂವಲ್ಲಿ  ಹೂವಾಗಿ ಕಾಯಲ್ಲಿ ಕಾಯಾಗಿ 
ಹೆಸರು ಗದ್ದೆಯ ನೋಡಿಕೊಂಡು 
ಯೌವ್ವನವ ಕಳೆದಳು ಚಿಂದಿಯ ಸೀರೆ ಉಟ್ಟಿಕೊಂಡು



ಸತ್ತಳು ಈಕೆ;
ಬಾಗು ಬೆನ್ನಿನ ಮುದುಕಿಗೆಷ್ಟು ಪ್ರಾಯ?
ಎಷ್ಟುಗಾದಿಯ ಚಂದ್ರ , ಒಲೆಯೆದುರು ಹೋಳಿಗೆಯ ಸಂಭ್ರಮ;
ಎಷ್ಟು ಸಲ  ಮುದುಕಿ ಅತ್ತಳು  ಕಾಸಿಗೆ, ಕೆಟ್ಟ ಪೈರಿಗೆ, ಸತ್ತ ಕರುವಿಗೆ;
ಎಷ್ಟು ಸಲ ಹುಡುಕುತ್ತ ಊರೂರು ಅಲೆದಳು 
ತಪ್ಪಿಸಿಕೊಂಡ ಮುದಿಯ ಎಮ್ಮೆಗೆ?


ಸತಿ, ಸಾವಿತ್ರಿ, ಜಾನಕಿ, ಊರ್ಮಿಳೆಯಲ್ಲ;
ಚರಿತ್ರೆ ಪುಸ್ತಕದ ಶಾಂತ, ಶ್ವೇತ, ಗಂಭೀರೆಯಲ್ಲ ;
ಗಾಂಧೀಜಿ, ರಾಮಕೃಷ್ಣರ ಸತಿಯರಂತಲ್ಲ;
ಮುತ್ತೈದೆಯಾಗಿ ಕುಂಕುಮ ಕೂಡ ಇಡಲಿಲ್ಲ.

ಬನದ  ಕರಡಿಯ   ಹಾಗೆ  ಚಿಕ್ಕ  ಮಕ್ಕಳ ಹೊತ್ತು 
ಗಂಡನ್ನ ಸಾಕಿದಳು ಕಾಸು ಗಂಟಿಕ್ಕಿದಳು 
ನೊಂದ ನಾಯಿಯ ಹಾಗೆ ಬೈದು, ಗೊಣಗಿ, ಗುದ್ದಾಡಿದಳು.
ಸಣ್ಣತನ, ಕೊಂಕು, ಕೆರೆದಾಟ ಕೋತಿಯ ಹಾಗೆ;
ಎಲ್ಲಕ್ಕೆ ಮನೆತನದ ಉದ್ಧಾರ ಸೂತ್ರ ;
ಈಕೆ ಉರಿದೆದ್ದಾಳು  ಮಗ ಕೆಟ್ಟರೆ, ಗಂಡ ಬೇರೆ ಕಡೆ ಹೋದಾಗ  ಮಾತ್ರ .

ಬನದ ಕರಡಿಗೆ ನಿಮ್ಮ ಭಗವದ್ಗೀತೆ ಬೇಡ ;
ನನ್ನವ್ವ ಬದುಕಿದ್ದು ಕಾಳು ಕಡ್ಡಿಗೆ, ದುಡಿತಕ್ಕೆಮಕ್ಕಳಿಗೆ;
ಮೇಲೊಂದು ಸೂರು. ಅನ್ನ, ರೊಟ್ಟಿಹಚಡಕ್ಕೆ
 ಸರೀಕರ ಎದುರು ತಲೆಯೆತ್ತಿ ನಡಿಯಲಿಕ್ಕೆ

ಇವಳಿಗೆ  ಮೆಚ್ಚುಗೆಕೃತಜ್ಞತೆಯ  ಕಣ್ಣೀರು ;
ಹೆತ್ತದಕ್ಕೆ, ಮಣ್ಣಲ್ಲಿ ಬದುಕಿ 
ಮನೆಯಿಂದ ಹೊಲಕ್ಕೆ ಹೋದಂತೆ 
ತಣ್ಣಗೆ ಮಾತಾಡುತ್ತಲೇ ಹೊರಟು ಹೋದುದಕ್ಕೆ 







ಮಂಗಳವಾರ, ಮಾರ್ಚ್ 6, 2012

ಕುವೆಂಪು - ವಿಚಾರ ಕ್ರಾಂತಿಗೆ ಆಹ್ವಾನ


ನಮ್ಮ ಸ್ವಾತಂತ್ರ್ಯಸಂಪಾದನೆಗೆ ನಮ್ಮ ರಾಷ್ಟ್ರಪಿತನನ್ನೇನೋ  ಉಪಯೋಗಿಸಿಕೊಂಡೆವು . ಆತ  ಬೋಧಿಸಿದ  ಸ್ವದೇಶೀ, ಸತ್ಯಾಗ್ರಹಅಹಿಂಸೆ, ಗ್ರಾಮ ಸ್ವರಾಜ್ಯ , ಸರಳ  ಜೀವನ , ತ್ಯಾಗ  ಬುದ್ಧಿ  ಮೊದಲಾದವುಗಳನ್ನು  ಬಿಟ್ಟೆವು. ಸ್ವಾತಂತ್ರ್ಯಸಂಪಾದನೆ ಆದೊಡನೆಯೇ ಆತನನ್ನು ತೊಲಗಿಸಿದೆವುಆತನ ದೇಹಕ್ಕೆ  ಗುಂಡಿಕ್ಕಿದವನೇನೋ  ಒಬ್ಬನೇ ; ಆದರೆ   ತರುವಾಯ  ಆತನ  ಧ್ಯೇಯಕ್ಕೆ  ಉರುಳಿಕ್ಕಿ ಕೊಂದವರು ಹಲವರು   ಆತನ  ಅನುಯಾಯಿಗಳೇ !!! ನೆಹರೂ  ಅವರ ಮುಂದಾಳುತನದ  ನೇತೃತ್ವದಲ್ಲಿ   ನಾವು  ಗಾಂಧೀಜಿಯ  ತತ್ವಗಳನ್ನೆಲ್ಲ  ಮೂಲೆಗೂತ್ತಿ , ನಮ್ಮ  ರಾಷ್ಟ್ರವನ್ನು  ಏಕಾಏಕಿ  ಅಭಿವೃದ್ಧ, ಶ್ರೀಮಂತ ಪಾಶ್ಚ್ಯಾತ್ಯ ದೇಶಗಳ ಸರಿಸಮಕ್ಕೆರಿಸುವ ಹುಮ್ಮಸ್ಸಿನಲ್ಲಿ ಸಂಪೂರ್ಣವಾಗಿ  ಅವರ ಅನುಕರಣೆಗೆ  ದೀಕ್ಷಿತರಾದೆವು. ತರುವಾಯ ಸ್ವದೇಶದ ಮತ್ತು ವಿದೇಶದ ಕೆಲವು  ರಾಜಕೀಯ ಮತ್ತು ಆರ್ಥಿಕ ಪ್ರಾಜ್ಞರು  ಕೊಟ್ಟ ಎಚ್ಚರಿಕೆಯನ್ನೂ ನಾವು ಲೆಕ್ಕಿಸಲಿಲ್ಲ. ಪ್ರತಿಗಾಮಿ ಸೂಚನೆಗಳೆಂದೂ ಅವನ್ನು ತಿರಸ್ಕರಿಸಿದೆವು. ಆದರೂ ಗಾಂಧೀಜಿಯನ್ನು ಕೈಬಿಟ್ಟೆವು ಎಂದಾಗಬಾರದೆಂದು ಅವರ ಧ್ಯೇಯಗಳನ್ನು ಮ್ಯೂಸಿಯಂಗಳಲ್ಲಿ   ಪ್ರದರ್ಶನಕ್ಕಿಟ್ಟೆವು.ಅಂದರೆ  ಧ್ಯೇಯಗಳ ಜೀವ ತೆಗೆದು,ಜೀವವಿದ್ದರೆ ಅವುಗಳಿಂದ    ತೊಂದರೆಯಾಗಬಹುದೆಂಬ ಮುಂದಾಲೋಚನೆಯಿಂದ ಅವುಗಳನ್ನು ಕೊಂದು  , ಚರ್ಮ ಸುಲಿದು,  ಹದ  ಹಾಕಿ, ಪ್ರದರ್ಶನ  ಮಂದಿರಗಳನ್ನು  ಕತ್ತಿಸಿದೆವು . ಅವುಗಳ  ಪೂಜೆಗೂ  ಏರ್ಪಾಟುಮಾಡಿ  ಅವರ  ಭಕ್ತರನ್ನು  ಸಮಾಧಾನ  ಪಡಿಸಿ  , ಮೂಲೆಗೆ ತಳ್ಳಿ, ಮತ್ತೆ ನಮ್ಮ  ಪಾಶ್ಚ್ಯಾತ್ಯ  ಅನುಕರಣೆಯ ಪಂಚವಾರ್ಷಿಕ ಯೋಜನೆಗಳ ಯಾಗಕ್ಕೆ   ಶುರುಮಾಡಿದೆವು .


ಪರಕೀಯರ   ಶೋಷಣೆಯಿಂದ  ನಮ್ಮ  ದೇಶ  ಎಂತಹ  ಬಡತನಕ್ಕಿಳಿದಿತ್ತು  ಎಂದರೆ  ಯಂತ್ರ  ನಾಗರಿಕತೆಯಲ್ಲಿ  ತುಂಬಾ  ಮುಂದುವರೆದ  ದೇಶಗಳಂತೆ  ಮಹಾ  ಮಹಾ  ಕಾರ್ಖಾನೆಗಳ  ಮತ್ತು  ಕೈಗಾರಿಕೆಗಳ  ಭಾರವನ್ನು  ಹೊರುವ  ತ್ರಾಣವೇ  ಅದಕ್ಕಿರಲಿಲ್ಲ . ಆದರೂ  ಅದರ  ಹೆಗಲ   ಮೇಲೆ  ಅದನ್ನೆಲ್ಲ  ಹೇರಿದೆವು . ಕೋಟ್ಯಂತರ  ಧನದ  ಸಾಲವೆತ್ತಿ  ನಮಗೆ  ಆಗ  ತುರುತ್ತಾಗಿ  ಬೇಕಾಗಿದ್ದುದು  ಅನ್ನ , ನೀರು , ಬಟ್ಟೆ  ಮತ್ತು  ಗುಡಿಸಲು . ಆದರೆ  ನಾವು  ಮೋಟಾರು  ಕಾರುಗಳನ್ನು  ತಯಾರಿಸುವ  ಏರ್ಪಾಡಿಗೆ ಬೆಂಬಲ  ಕೊಟ್ಟೆವು . ನಾವೂ  ಉಪಗ್ರಹಗಳನ್ನು  ಹಾರಿಸಬೇಕೆಂಬ  ಹಠ  ತೊಟ್ಟೆವು . ನಾವೂ  ರಿಯಾಕ್ಟರುಗಳನ್ನು ಸ್ಥಾಪಿಸಿದೆವು .  ಕೊನೆಗೆ  ಆಟಂ   ಸಾಧನವನ್ನೂ    ಸಿಡಿಸಿದೆವು  . ಹೀಗೆ    ಅನೇಕ  ರೀತಿಯ  ಭೋಗದ    ಮತ್ತು  ಶೋಕಿಯ  ವಸ್ತುಗಳ  ತಯಾರಿಕೆಗೆ  ಬಡ   ರೈತರ  ತೆರಿಗೆಯ  ಧನವನ್ನು  ವ್ಯಯ ಮಾಡಿದೆವು . ದೊಡ್ಡ   ದೊಡ್ಡ  ಪಟ್ಟಣಗಳನ್ನು  ಭೋಗ   ಜೀವನ  ನಡೆಸುವ  ಶ್ರೀಮಂತರ  ಸುಖಕ್ಕಾಗಿ  ಹಳ್ಳಿಗಳನ್ನೂ  ರೈತಾಪಿ  ವರ್ಗವನ್ನೂ   ಮರೆತು  ಬಿಟ್ಟೆವು .   ಅಥವಾ   ಮರೆತೇ       ಬಿಟ್ಟೆವು  ಎಂಬ   ದೂರಿನಿಂದ  ಪಾರಾಗುವುದಾಕ್ಕಾಗಿಯೂ  ಮತ್ತು   ಅವರು  ಸಂಪೂರ್ಣವಾಗಿ  ನಿರ್ಜೀವವಾದರೆ  ನಮಗಾಗಿ  ದುಡಿಯುವವರು    ಯಾರೂ  ಇಲ್ಲದಂತೆ  ಆಗಬಾರದು  ಎಂಬುದಕ್ಕಗಿಯೂ  ಜೀವಾಡುವಷ್ಟರ ಮಟ್ಟಿಗೆ  ಅವರ  ಭಿಕ್ಷಾ   ಪಾತ್ರೆಗೂ  ಕಾಸು  ಎಸೆದದ್ದುಂಟು . ನಗರಗಳಲ್ಲಿ  ಪರ್ವತೊಪಮ  ಕಟ್ಟಡಗಳನ್ನು  ಕಟ್ಟುವುದಕ್ಕೆ  ನಮಗೆ  ದುಡ್ಡು  ಇತ್ತು . ಆದರೆ ಹಳ್ಳಿಗಳಲ್ಲಿ   ಬಾವಿ  ತೋಡಲು  ಹಣವಿರಲಿಲ್ಲ .


ಮನುಜ ಮತವಿಶ್ವ ಪಥ,ಸರ್ವೋದಯ , ಸಮನ್ವಯಪೂರ್ಣದೃಷ್ಟಿ  ಪದಗಳು  ಮಂತ್ರಗಳಾಗಿ   ನಮ್ಮನ್ನು   ಜಾತಿ    ಮತಗಳಿಂದಲೂ  ಬೇಧ ಭಾವಗಳಿಂದಲೂ   ಪಾರುಮಾಡಿ ನಮ್ಮಿಂದ ನಿಜವಾದ  ಪ್ರಜಾಸತ್ತೆ   ಮತ್ತು   ಸಮಾಜವಾದ   ನಿರ್ಮಾಣವಾಗಲಿ .