ಶನಿವಾರ, ಡಿಸೆಂಬರ್ 28, 2013

ಇನ್ನೂ ಇದೆ ಪಯಣ - ನೆಲ್ಸನ್ ಮಂಡೇಲಾ



ಆ ಸುಧೀರ್ಘ ಮತ್ತು ಏಕಾಂತದ ದಿನಗಳಲ್ಲೇ ನನ್ನ ಜನರಿಗಾಗಿ ನಾನು ಹೊಂದಿದ್ದ ಸ್ವಾತಂತ್ರ್ಯದ ಹಸಿವು ಎಲ್ಲರ ಪಾಲಿನ ಸ್ವಾತಂತ್ರ್ಯದ ಹಸಿವಾಗಿ ಬೆಳೆದದ್ದು.

ತುಳಿತಕ್ಕೊಳಗಾದವನಂತೆಯೇ, ತುಳಿಯುವವನು ಮುಕ್ತನಾಗಬೇಕು ಎಂಬುದು ನನ್ನ ಅಭಿಪ್ರಾಯ. ಇನ್ನೊಬ್ಬರ ಸ್ವಾತಂತ್ರ್ಯವನ್ನು ಅಪಹರಿಸುವವನು ಸ್ವತಃ ತಾನೇ ದ್ವೇಷದ ಬಂಧಿ. ಆತ ಪೂರ್ವಾಗ್ರಹ ಮತ್ತು ಸಣ್ಣ ಮನಸ್ಸಿನ ಪಂಜರದ ಸರಳುಗಳ ಹಿಂದಿದ್ದಾನೆ. ನನ್ನ ಸ್ವಾತಂತ್ರ್ಯವನ್ನು ಇನ್ನೊಬ್ಬರು ಒಯ್ದಾಗ ನಾನು ಹೇಗೆ ಮುಕ್ತನಲ್ಲವೋ ಕದ್ದಾಗ ಕೂಡ. ಶೋಷಕ ಮತ್ತು ಶೋಷಿತರಿಬ್ಬರೂ ಮಾನವೀಯತೆಯಿಂದ ವಂಚಿತರು.

ಜೈಲಿನಿಂದ ಹೊರಬಿದ್ದಾಗ, ಇಬ್ಬರ ಬಿಡುಗಡೆಯನ್ನೂ ಸಾಧಿಸುವುದು ನನ್ನ ಗುರಿಯಾಗಿತ್ತು. ಅದು ಈಡೇರಿದೆ ಎಂದು ಕೆಲವರು ಹೇಳಬಹುದು. ಆದರೆ ಅದು ಸತ್ಯವಲ್ಲ. ನಾವಿನ್ನೂ ಮುಕ್ತರಲ್ಲ. ಮುಕ್ತರಾಗಿಲ್ಲ. ಮುಕ್ತರಾಗುವ ಹಕ್ಕನ್ನಷ್ಟೆ ಪಡೆದುಕೊಂಡಿದ್ದೇವೆ. ಅಂತಿಮ ಹೆಜ್ಜೆಯನ್ನು ನಾವು ಇಟ್ಟಿಲ್ಲ. ಆ ಸುಧೀರ್ಘ ಹಾಗೂ ಕಷ್ಟಕರ ಪಯಣದ ಮೊದಲ ಹೆಜ್ಜೆಯನ್ನಷ್ಟೆ ಇಟ್ಟಿದ್ದೇವೆ.

ಮುಕ್ತರಾಗುವುದೆಂದರೆ ಸರಪಳಿಗಳನ್ನು ಕತ್ತರಿಸುವುದಷ್ಟೆ ಅಲ್ಲ. ಇನ್ನೊಬ್ಬನ ಸ್ವಾತಂತ್ರ್ಯವನ್ನು ಗೌರವಿಸುವುದೂ ಕೂಡ.

ನಾನು ಆ ಬಿಡುಗಡೆಯ ಸುದೀರ್ಘ ಯಾನವನ್ನು ಕೈಗೊಂಡಿದ್ದೇನೆ. ತಪ್ಪು ಮಾಡದಂತೆ ಪ್ರಯತ್ನಿಸಿದ್ದೇನೆ. ತಪ್ಪು ಮಾಡಿದ್ದೇನೆ. ಬೆಟ್ಟ ಏರಿದವನಿಗೆ ಗೊತ್ತಾಗುತ್ತದೆ ಇದಕ್ಕಿಂತ ದೊಡ್ಡ ಕ್ಲಿಷ್ಟ ಪರ್ವತಗಳಿವೆ.

ನಾನಿಲ್ಲಿ ಒಂದು ಘಳಿಗೆ ವಿಶ್ರಾಂತಿ ಪಡೆಯುತ್ತೇನೆ. ಅದು ನನ್ನೆದುರಿರುವ ದಿವ್ಯ ಸೌಂದರ್ಯವನ್ನು ವೀಕ್ಷಿಸಲು, ಸಾಗಿ ಬಂದ ದಾರಿಯನ್ನೊಮ್ಮೆ ಅವಲೋಕಿಸಲು, ಆದರೆ ಅದು ಕ್ಷಣಕಾಲವಷ್ಟೇ. ಯಾಕೆಂದರೆ ಸ್ವಾತಂತ್ರ್ಯದ ಜೊತೆಗೆ ಹೊಣೆಗಾರಿಕೆಗಳೂ ಬರುತ್ತವೆ.

ನನ್ನ ಪಯಣ ಇನ್ನೂ ಮುಗಿದಿಲ್ಲ……..


ಶನಿವಾರ, ಆಗಸ್ಟ್ 10, 2013

ನೆಲ್ಸನ್ ಮಂಡೇಲಾ - ರಂಜಾನ್ ದರ್ಗಾ


ಭೂ ಮಂಡಲದ ತುಂಬೆಲ್ಲಾ
ಹಬ್ಬಿದೆ ಹರ್ಷೋದ್ಗಾರ
ನೆಲ್ಸನ್ ಮಂಡೇಲಾ. . .

ಆತ ಮುಗುಳ್ನಗುತ್ತಾನೆ
ಮನುಷ್ಯರ ಮೇಲಿನ
ಅಪಾರ ಪ್ರೀತಿಯಿಂದ

ಜನಸಾಗರದಲ್ಲಿ ಆಗ
ಹುಟ್ಟುವುದು ಹೋರಾಟದ ಚಂಡಮಾರುತ

ಕಣ್ಣಲ್ಲಿ ಚಂದ್ರರಿದ್ದರೂ
ಹೊರ ಹೊಮ್ಮುತ್ತಿವೆ
ಪ್ರಖರ ಕಿರಣಗಳು

ವಿಜಯದ ಕೈ ಬೀಸುವಾಗ
ಹಾರುತ್ತದೆ ಸ್ವಾತಂತ್ರ್ಯದ ಹಕ್ಕಿ
ಭೂ ಮಂಡಲದ ತುಂಬ

ಆಳುವ ಬಿಳಿಯರು ಬೆಚ್ಚುವ
ಆತನ ವಾದದಲ್ಲಿ ಕಪ್ಪಿಲ್ಲ
ದ್ವೇಷಕ್ಕೆ ಮಾತ್ರ ವಿರೋಧ

ವರ್ತಮಾನ ಆತನ ಸ್ಥಾನ
ತಲ್ಲೀನನಾಗಿದ್ದಾನೆ ಎಡಗೈಯಿಂದ
ತೆರೆಯುವಲ್ಲಿ ಭವಿಷ್ಯದ ಬಾಗಿಲು

ಶತಮಾನಗಳ ಆಳದಿಂದ
ತುಂಬಿ ಬಂದ ಕೋಪ ಅದುಮಿ
ಆತ ಮಾತಾಡುವಾಗ -
ಕಿವುಡರು ಕೇಳಬಲ್ಲರು
ಕುರುಡರು ನೋಡಬಲ್ಲರು
ಕುಂಟರು ನಡೆಯಬಲ್ಲರು

ಆತ ಹೇಳುವುದಿಷ್ಟೆಃ
ಕಪ್ಪು-ಬಿಳಿ ಚರ್ಮಗಳ ಒಳಗೆ
ಮನುಷ್ಯ ಒಬ್ಬನೇ
ಎಲ್ಲ ಅಸಮಾನತೆಗಳ
ಬೂದಿಯಿಂದ ಹುಟ್ಟುವನು

ಮನುಷ್ಯ ನಿಜ

ಗುರುವಾರ, ಜನವರಿ 3, 2013

ದೇವರು ಬೇಕು , ಆದರೆ ಅವನಿಲ್ಲ



ಮೊನ್ನೆ ಹುಬ್ಬಳ್ಳಿಯಿಂದ ಬೆಂಗಳೂರಿಗೆ ಬರುತ್ತಿದ್ದೆಹುಬ್ಬಳ್ಳಿ ರೈಲ್ವೆ ಸ್ಟೇಷನ್ನಿನಲ್ಲಿ ಒಬ್ಬ ಮುದುಕಿ ಭಿಕ್ಷೆ ಬೇಡುತ್ತಿದ್ದಳುಸುಮ್ಮನೆ ಕಣ್ಣು ಹಾಯಿಸಿದೆಅವಳ ಮಗಳು ಆಗತಾನೆ ಮಗುವನ್ನು ಹೆತ್ತಿದ್ದಳುಒಂದೆರಡು ದಿನ ಆಗಿರಬಹುದು ಮಗುವಿಗೆಮಗುವಿನ ಕೆಂಪನೆ ಪಾದಗಳು ನನ್ನನ್ನು ಹಂಗಿಸಿದವುಇಬ್ಬರು ಸೇರಿ ಭಿಕ್ಷೆ ಬೇಡುತ್ತಿದ್ದರು ಅದೂ  ರಣ ಬಿಸಿಲಿನಲ್ಲಿಕರಳು ಚುರ್ರ್ ಎಂದಿತುನಾನು ಭಿಕ್ಷೆ ಬೇಡುವವರನ್ನು ತಾತ್ಸಾರದಿಂದಲೇ ನೋಡಿದವನುಹಾಗೆ ಮುಂದೆ ನಡೆದುಕೊಂಡು ಬಂದೆಅವ್ವ ನೆನಪಾದಳುಮನೆಗೆ ಯಾರಾದರು ಬಡವರು ಬಂದು ಮಗಳು ಮೈ ನೆರೆತಿದ್ದಾಳೆಹಡೆದಿದ್ದಾಳೆ  ಅಂತ ಅಂದಾಗ ಅವ್ವ ಅವರನ್ನು ಹಾಗೆ ಬರೀಗೈಲಿ ಕಳುಹಿಸಿದ್ದು ಇಲ್ಲವೇ ಇಲ್ಲದುಡ್ದಾದರೆ  ದುಡ್ಡು ಇಲ್ಲವೇ ದಿನಸಿ ಕೊಟ್ಟು ಕಳುಹಿಸುತ್ತಾಳೆ . ಹಾಗೆ ಇವರಿಗೆ ಕೊಡಲು ನನ್ನಲ್ಲಿ ಏನಿದೆ ಎಂದು ವಿಚಾರ ಮಾಡುತ್ತ ಮುಂದೆ ನಡೆಯುತ್ತಾ ಬಂದೆಅವ್ವ ಅಕ್ಕ ಸೇರಿ ಕಟ್ಟಿದ ಬುತ್ತಿಯ ಗಂಟಿತ್ತು . ಎಷ್ಟೋ ಮುಂದೆ ಹೋದವನು ಮರಳಿ ಬಂದು  ಬುತ್ತಿಯನ್ನು ಅವರಿಗೆ ಕೊಟ್ಟು  ನನ್ನ ಪಯಣ ಮುಂದುವರೆಸಿದೆಪಯಣದ ತುಂಬಾ ಇದೇ  ಯೋಚನೆ.

ನನ್ನ ಕಟ್ಟಾ ಆಸ್ತಿಕ  ಗೆಳೆಯನಿಗೆ ಇದನೆಲ್ಲ  ಹೇಳಿದೆ.  ತುಂಬಾ ಒಳ್ಳೆಯ ಕೆಲಸ ಮಾಡಿದೆ ಎಂದ. ನಾನವನಿಗೆ ನಿಮ್ಮ ದೇವರು ಈಗ ಎಲ್ಲಿದ್ದ ಎಂದು ಕೇಳಿದೆ. ನಿನ್ನ ಮನಸ್ಸಿನಲ್ಲಿ ಎಂದ. ಎದೆ ಅಗಲವಾಗಲಿಲ್ಲ, ನಾಚಿಕೆಯಾಯಿತು.  ದೇವರಿದ್ದಾನೆ ಎಂದ ಮೇಲೆ ಎಲ್ಲರಿಗೂ ಇರಬೇಕಲ್ಲವೇ ಎಂದೇ. ನಿನ್ನ ಜೊತೆ ವಾದ ಮಾಡಿ ಗೆಲ್ಲುವ ಶಕ್ತಿ ನನ್ನಲ್ಲಿಲ್ಲ ಎಂದ

ದೇವರನ್ನು ನಾನು ನಂಬುವುದಿಲ್ಲ ಎಂದು ಇದೇ  ಗೆಳೆಯನಿಗೆ ಹೇಳಿದ್ದಾಗ ನೀನು ಅವನ್ನನ್ನು ನಂಬಬಾರದೆಂದರೆ ಅವನ ಮಟ್ಟವನ್ನು ನೀನು  ಏರಬೇಕು ಇಲ್ಲವೇ ಅವನನ್ನೇ ನಿನ್ನ ಮಟ್ಟಕ್ಕೆ ಇಳಿಸಬೇಕು ಎಂದಿದ್ದ
ನಾವು ಅವನ ಮಟ್ಟಕ್ಕೇರಿದರೆ ಅವನ ಸಹಾಯವೇ ಅನಾವಶ್ಯಕ : ಅಲ್ಲದೆ ಆಗ ನಮ್ಮ ಇಷ್ಟಾರ್ಥಗಳು ನಮಗೇ  ಬೇಡವೆನ್ನಿಸಬಹುದು
ಇನ್ನು ದೇವರನ್ನೇ ನಮ್ಮ ಮಟ್ಟಕ್ಕೆ ಇಳಿಸಿಕೊಂಡು ಅವನೂ ನಮ್ಮಂತೆ ಸ್ತೋತ್ರ ಪ್ರಿಯ ನೆಂದು ಭಾವಿಸಿ ದೇವರನ್ನು ನಮ್ಮ ಪ್ರತಿಬಿಂಬವಾಗಿ  ಸೃಷ್ಟಿಸುತ್ತೇವೆ ಎಂದಿದ್ದೆ. ಮತ್ತೆ ಅದೇ ಮಾತನ್ನು ಹೇಳಿದ್ದ.  ನಿನ್ನ ಜೊತೆ ವಾದ ಮಾಡಿ ಗೆಲ್ಲುವ ಶಕ್ತಿ ನನ್ನಲ್ಲಿಲ್ಲ.

ಇದೆ ಎಂಬ ವಸ್ತುವಿನ ಯಾವ ಪರಿಚಯವೂ ಇಲ್ಲದ ನಂಬಿಕೆ ಏನು ಮಾಡಿತು...? 
ದೇವರಿದ್ದರೆ ಲೋಕಹಿತಕ್ಕಾಗಿ ಇರಬೇಕು. ಅದರಲ್ಲಿ ಆಸಕ್ತಿಯಿಲ್ಲದ ದೇವರನ್ನು ಕಟ್ಟಿಕೊಂಡು ನಮಗೆ ಆಗಬೇಕಾದದ್ದೇನು. ಹಿತದ ಸಾಧನೆ ಲಕ್ಷಾಂತರ ವರ್ಷ ಕಳೆದ ಮೇಲೂ ' ಆಗಬೇಕು' ಎನ್ನುವ ಸ್ಥಿತಿಯಲ್ಲೇ ಇದೆ

ಮನುಕುಲಕ್ಕೆ ನನ್ನಂಥ ನಿರೀಶ್ವರವಾದಿಗಳೂ  ಸೇರಿದಂತೆ ಮನುಕುಲಕ್ಕೆ ಕರುಣಾದ್ರ ಹೃದಯನೂ , ಪ್ರೇಮಸ್ವರೂಪಿಯೂ  ಆದ ದೇವರು ಬೇಕು.ನಾನು ದೇವರಿಲ್ಲ ಎಂದುಕೊಳ್ಳುವಾಗ ನನ್ನ ಮನಸ್ಸಿನಲ್ಲಿರುವುದು ಸಂತೋಷವಲ್ಲ  ನಾನು ಸಂಪ್ರದಾಯದ ಗುಲಾಮನಲ್ಲ , ವಿಚಾರವಾದಿ ' ಎಂಬ ಹೆಮ್ಮೆಯಲ್ಲ ನಂಬುವವರನ್ನು ಹೀಯಾಳಿಸಬೇಕೆಂಬ ಅಪೇಕ್ಷೆಯಂತೂ  ಖಂಡಿತ ಅಲ್ಲ'ದೇವರು ಇಲ್ಲವಲ್ಲ ' ಎಂಬ ವಿಷಾದ.. 

ದೇವರು ಬೇಕು , ಆದರೆ  ಅವನಿಲ್ಲ ಇದು ನಮ್ಮ ಕರುಣಾಜನಕ ಐರನಿ .

ಒಟ್ಟಿನಲ್ಲಿ ಜೀವಕೋಟಿಯ ಸಂಕಟವನ್ನು ಪರಿಹರಿಸಬಲ್ಲ ದೇವರು - ಅಂತ ದೇವರು ಇದ್ದರೆ  ಯಾರು ಬೇಡ ಎನ್ನುತ್ತಾರೆ.

     ಗ್ರಂಥ ಋಣ:ದೇವರು (ಎ ಎನ್ ಮೂರ್ತಿರಾವ್)