ಸೋಮವಾರ, ಡಿಸೆಂಬರ್ 17, 2012

ಶಿಕಾರಿ - ಯಶವಂತ್ ಚಿತ್ತಾಲ



Ø ಬದುಕಿಗೆ ಅರ್ಥವೇನು? ಎಂದು ಕೇಳುತ್ತ ಕೂಡ್ರುವುದು ಏನು ಹುಡುಕಾಟದ ಲಕ್ಷಣವೋ, ಇಲ್ಲ ಬದುಕಿನಲ್ಲಿ ವಿಶ್ವಾಸ ಕಳಕೊಂಡದ್ದರ ಲಕ್ಷಣವೋ?

Ø ಎಂಥ ಕ್ಷುಲ್ಲಕ ಸಂಗತಿಗಳು ನನ್ನ ಜೀವನದ ಎಂತಹ ಮಹತ್ವದ ಘಟನೆಗಳಿಗೆ ಕಾರಣಗಳಾಗಿವೆ ಎಂಬುದನ್ನು ನೆನೆದರೆ ಆಶ್ಚರ್ಯವಾಗುತ್ತದೆ.

Ø ಈ ಘಟನೆಗಳಿಂದಾಗಿ ಇಷ್ಟೊಂದು ಯಾತನೆಯನ್ನು ಯಾಕೆ ಅನುಭವಿಸಬೇಕು? ಅನುಭವಿಸುತ್ತೇನೆ. ಯಾತನೆಯ ಬೇರುಗಳವರೆಗೆ ಇಳಿದು ನೋಡಬೇಕು.

Ø ನನ್ನನ್ನು ದೂರಬೇಡ, ದೂರು ಈ ಸಮುದ್ರವನ್ನು ಎಲ್ಲ ನೋವನ್ನು ಕ್ಷುಲ್ಲಕಗೊಳಿಸುವ ಅದರ ಉಲ್ಲಾಸದ ಉದ್ಘೋಷವನ್ನು .

Ø ಇಂದಿನ ಯಾಂತ್ರಿಕ ಜೀವನದಿಂದಾಗಿ ದಡ್ಡು ಬಿದ್ದ ತಮ್ಮ ಸಂವೇದನೆಗಳನ್ನು ಚುರುಕುಗೊಳಿಸಲು ಇವರು ಇತರರ ದುಃಖವನ್ನು ಕೂಡ ಉಪಯೋಗಿಸಿಕೊಳ್ಳಬಲ್ಲರೇನೋ? ಉಳಿದವರ ಯಾತನೆ ಕೂಡ ಇವರಿಗೆ ಮನರಂಜನೆಯ ವಿಷಯವಾಗಬಲ್ಲುದೇನೋ?

Ø The logic of  all actions have their roots in selfish motives    

ಬುಧವಾರ, ನವೆಂಬರ್ 14, 2012

ಹಣತೆ - ಜಿ.ಎಸ್ . ಶಿವರುದ್ರಪ್ಪ







ಹಣತೆ ಹಚ್ಚುತ್ತೇನೆ ನಾನೂ 
ಕತ್ತಲನ್ನು ಗೆದ್ದು ನಿಲ್ಲುತ್ತೇನೆಂಬ  ಜಿದ್ದಿನಿಂದಲ್ಲ 
ಲೆಕ್ಕವೇ ಇರದ ದೀಪಾವಳಿಯ ಹಡಗುಗಳೇ 
ಇದರಲ್ಲಿ ಮುಳುಗಿ ಕರಗಿರುವಾಗ 
ನಾನು ಹಚ್ಚುವ ಹಣತೆ ಶಾಶ್ವತವೆಂಬ ಭ್ರಾಂತಿ ನನಗಿಲ್ಲ 

ಹಣತೆ ಹಚ್ಚುತ್ತೇನೆ ನಾನೂ 
ಕತ್ತಲಿನಿಂದ ಬೆಳಕಿನ ಕಡೆಗೆ ನಡೆದೇನೆಂಬ ಆಸೆಯಿಂದಲ್ಲ 
ಕತ್ತಲಿನಿಂದ ಕತ್ತಲಿಗೆ ತಡಕಾಡಿಕೊಂಡು ಬಂದಿವೆ  
ಹೆಜ್ಜೆ ಶತಮಾನದಿಂದಲೂ 

ನಡು ನಡುವೆ ಒಂದಷ್ಟು ಬೆಳಕು ಬೇಕೆಂದು 
ಆಗಾಗ ಕಡ್ಡಿ ಗೀಚಿದ್ದೇವೆ, ದೀಪ ಮುಡಿಸಿದ್ದೇವೆ.
ವೇದ, ಶಾಸ್ತ್ರ , ಪುರಾಣ, ಇತಿಹಾಸ, ಕಾವ್ಯ , ವಿಜ್ಞಾನಗಳ 
ಮತಾಪು, ಪಟಾಕಿ, ಸುರುಸುರು ಬತ್ತಿ , ಹೂ ಬಾಣ ಸುಟ್ಟಿದ್ದೇವೆ
ತಮಸೋಮ ಜ್ಯೋತಿರ್ಗಮಯ  
ಎನ್ನುತ್ತಾ ಬರೀ ಬೂದಿಯನ್ನೇ ಕೊನೆಗೆ ಕಂಡಿದ್ದೇವೆ

ನನಗೂ ಗೊತ್ತು, ಕತ್ತಲೆಗೆ
ಕೊನೆಯಿರದ ಬಾಯಾರಿಕೆ.
ಎಷ್ಟೊಂದು ಬೆಳಕನ್ನು ಇದು ಉಟ್ಟರೂ, ತಿಂದರೂ
ಕುಡಿದರೂ ಇದಕ್ಕೆ ಇನ್ನೂ ಬೇಕು 
ಇನ್ನೂ ಬೇಕು ಎನ್ನುವ ಬಯಕೆ 

ಆದರೆ ಹಣತೆ ಹಚ್ಚುತ್ತೇನೆ ನಾನೂ 
ಕತ್ತಲೆಯನ್ನು ದಾಟುತ್ತೇನೆಂಬ ಭ್ರಮೆಯಿಂದಲ್ಲ 
ಇರುವಷ್ಟು ಹೊತ್ತು ನಿನ್ನ ಮುಖ ನಾನು ನಿನ್ನ  ಮುಖ ನೀನು  
ನೋಡಬಹುದೆಂಬ ಒಂದೇ ಒಂದು ಆಸೆಯಿಂದ 
ಹಣತೆ ಆರಿದ ಮೇಲೆ,  ನೀನು ಯಾರೋಮತ್ತೆ
ನಾನು ಯಾರೋ





ಗುರುವಾರ, ನವೆಂಬರ್ 1, 2012

ಕನ್ನಡ ತಾಯಿಯ ಸುಪ್ರಭಾತ - ಚಂದ್ರಶೇಖರ ಕಂಬಾರ




ಮುಂಗೋಳಿ ಕುಗ್ಯಾವು ಮೂಡಣ ಬೆಳಗಿ
ತಂಗಾಳಿ ಬೀಸ್ಯಾವು ತವರೀ ಹೂವರಳಿ
ಹೂ ಹೂವಿನೊಳಗೊಂದು ಕೈಲಾಸವರಳ್ಯಾವು
ಕೈಲಾಸ ಕೈ ಮುಗಿದು ಭೂ ಲೋಕಕಿಳಿದಾವು
ಸಾವಿರದ ಶರಣವ್ವ ಕನ್ನಡದ ತಾಯೇ

ಸೂಸು ನಗೆಯಲಿ ಜಗದ ಲೇಸ ತುಳುಕಿಸುವವಳೆ
ಕಲ್ಲಿನ ಎದೆಯೊಳಗೆ ಹುಲ್ಲು ಚಿಗುರಿಸುವವಳೆ
ಹಕ್ಕಿ ಹಾರ್ಯಾಡ್ಯಾವು ಹಾಡೂತ, ಏನಂತ?
ಉಧೊ ನಿನ್ನ ಪಾದಕ್ಕೆ ಆದಿ ಮೂರುತಿಯೇ
ಸಾವಿರದ ಶರಣವ್ವ ಕನ್ನಡದ ತಾಯೇ

ಪಡುಗಡಲ ತೆರೆಗಳಲಿ ಪಾದ ತೊಳೆವವಳೆ
ಬೆಟ್ಟ ಬಯಲಿನ ಹಸಿರ ತೊಟ್ಟು ನಿಂತವಳೆ
ಮಲೆನಾಡ ಶಿಖರದಲಿ ಮಳೆಬಿಲ್ಲ ಮುಡಿದವಳೆ
ಅವ್ವಾ ಅಂದಾಗೊಮ್ಮೆ ಸಾಕಾರಗೊಂಬವಳೆ
ನಗುಮೊಗದ ಜಗದಂಬೆ ಬೆಳಕಿನ ತಾಯೇ

ಕುರಿತು ಓದದ ಕಾವ್ಯ ಪರಿಣತರ ಮಾತೆ
ಸಂತರ ಶರಣರ ಮಂತ್ರದ ಮಾತೆ
ಶಬ್ದಕ್ಕ ಬೆಳಕನ್ನ ಮುಡಿಸುವ ಕವಿಗಣ
ದಿನಬೆಳಗು ಹೊಗಳುವರು ನಿನ್ನ ಕೀರ್ತಿಯನೆ
ಸಾವಿರದ ಶರಣವ್ವ ಕನ್ನಡದ ತಾಯೇ

ಜಾಣ ಜಾಣೆಯರೆದೆಗೆ ಕನಸು ಕೊಡುವವಳೆ
ಬಾಗಿದವರಿಗೆ ಭಾಗ ಹೃದಯ ಕೊಡುವವಳೆ
ನಿನ್ಹಾಂಗ ಧರ್ಮದಲಿ ಧಾರಾಳತನದಲ್ಲಿ
ಇನ್ನೊಬ್ಬರನು ಕಾಣೆ ಧರೆಗೆ ದೊಡ್ಡವಳೆ
ಸಾವಿರದ ಶರಣವ್ವ ಕನ್ನಡದ ತಾಯೇ

 ಮ್ಯಾಲೇಳು ಲೋಕಕ್ಕ ಕೀಳೇಲು ಲೋಕಕ್ಕ
ಅಧಿಕವಾಗಲಿ ಹಬ್ಬಿ ನಿನ್ನ ಕಾರಣಿಕ
ಹಾಲೊಕ್ಕಲಾಗಲಿ ಹೊನ್ನೊಕ್ಕಲಾಗಲಿ
ತೂಗು ತೊಟ್ಟಿಲ ಬೆಳ್ಳಿ ಬಟ್ಟಲದ ತಾಯೇ
ಸಾವಿರದ ಶರಣವ್ವ ಕನ್ನಡದ ತಾಯೇ

ಶನಿವಾರ, ಅಕ್ಟೋಬರ್ 20, 2012

ಚಿಗುರಿದ ಕನಸು - ಶಿವರಾಮ ಕಾರಂತ




ಮನೋದೌರ್ಬಲ್ಯಕ್ಕೂ ಒಂದು ಮಿತಿ ಇರಬೇಕು.

ಒಂದು ಗಳಿಗೆಯ ಉನ್ಮತ್ತತೆಯಿಂದ ಯಾವಜ್ಜೀವನದ ಭವಿಷ್ಯ ನಿರ್ಧರಿಸುವುದು ತಪ್ಪು.

ಆದರ್ಶಕ್ಕಾಗಿ, ತನ್ನವರಿಗಾಗಿ, ಜನಕ್ಕಾಗಿ ವ್ಯಕ್ತಿ ಸುಖವನ್ನು ಮರೆಯಲಾರದೆ ಹೋದರೆ ಬಾಳ್ವೆಗೆ ಚೆಲುವು ಬರಲಾರದು.

ಮನುಷ್ಯನ ಉದ್ಯೋಗಕ್ಕೂ, ಆದರ್ಶಕ್ಕೂ ಪರಸ್ಪರ ಹೊಂದಾಣಿಕೆ ಬಾರದೆ ಹೋದಲ್ಲಿ ಜೀವನದಲ್ಲಿ ಸುಖ ಸಿಗಲಾರದು.

ಆರಿಸಿದ ಬಾಳ್ವೆಯನ್ನು ಚೆನ್ನಾಗಿ ಮಾಡಿಕೊ, ಬಾಳ್ವೆ ಇರುವುದು ಕಲಿಯುವುದಕ್ಕೆ, ಕಲಿತು ತಿದ್ದಿಕೊಳ್ಳುವುದಕ್ಕೆ, ತಿದ್ದಿ ತೃಪ್ತಿ ಪಡಿಯುವುದಕ್ಕೆ.

ಬಾಳು ಬೆದರುವುದಕ್ಕಾಗಿಯಲ್ಲ. ಬದುಕುವುದಕ್ಕಾಗಿ.   

ಮಂಗಳವಾರ, ಸೆಪ್ಟೆಂಬರ್ 11, 2012

ಜೋಗಿ



        ಮನಸ್ಸೆಂಬ ಸಮುದ್ರ ಬೇಡದ ಯೋಚನೆಗಳನ್ನು ಬುದ್ಧಿ ತೀರಕ್ಕೆ ತಂದು ಎಸೆಯುತ್ತದೆ. ಹಿಂತಿರುಗಿ ನೋಡಿದರೆ ರಸಹೀನ ಕಬ್ಬಿನ ಜಲ್ಲೆಯಂತೆ ನಿನ್ನೆಗಳ ರಾಶಿ. ಮುಂದಕ್ಕೆ ನೋಡಿದರೆ ಚಾಚಿಕೊಂಡ ಮೂರು ದಾರಿಗಳು. ಬದುಕು ಒಡಂಬಡಿಕೆಯಲ್ಲಿದೆಯೋ, ಈಡೇರಿಕೆಯಲ್ಲಿದೆಯೋ ಎಂಬ ದ್ವಂದ್ವ ನಮ್ಮದು. ಬದುಕಿಗೆ ಉದ್ದೇಶಗಳೇ ಇಲ್ಲ. ಜೀವಮಾನ ಪೂರ್ತಿ ಕ್ಷಣಕ್ಕೋಸ್ಕರ ಕಾಯುತ್ತಿದ್ದೆ ಅನ್ನಿಸುವಂತ ಕ್ಷಣವೊಂದು ಥಟ್ಟನೆ ಹಾಜರಾಗಿ ಬಿಟ್ಟರೆ ಅಲ್ಲಿಗೆ ಮುಕ್ತಿ. ಜ್ಞಾನೋದಯ ಆಗುವತನಕ ಮಾತ್ರ ಹುಡುಕಾಟ ಒಮ್ಮೆ ಅರಿವು ಬೆಳಕಾದರೆ ಆಮೇಲೆ ಅರಿವೇ ಇರುವುದಿಲ್ಲ.

            ಸಂತೋಷವೇ ಬೇರೆ ರೋಚಕತೆಯೇ ಬೇರೆ. ಸಮೂಹದಲ್ಲಿ ಸವಿಯಬಹುದಾದದ್ದು ರೋಚಕತೆ, ಸಂಭ್ರಮ. ಏಕಾಂತದಲ್ಲಿ ಸವಿಯ ಬಹುದಾದದ್ದು ಖುಷಿ.

ಹತ್ತಿರವಾದದ್ದು ನೀರಸವೂ, ದೂರದಲ್ಲಿದ್ದುದು ಆಕರ್ಷಣೆಯೂ ಆಗಿ ಕಾಣುತ್ತದೆ.

          ಸಾವು ಯಾವತ್ತಿದ್ದರೂ ಭಯ ಮತ್ತು ಆಕರ್ಷಣೆ. ಬದುಕು ನಮ್ಮ ಜೊತೆಗಿದ್ದರೂ ಅಪರಿಚಿತ. ನಮಗೆ ನಮ್ಮ ಸತ್ತ-ಬದುಕಷ್ಟೆ ಗೊತ್ತು. ಅಂದರೆ ನಿನ್ನೆಗಳು ಗೊತ್ತು. ಬದುಕುವ ಕ್ಷಣದ ಬಗ್ಗೆ ಗೊತ್ತಿಲ್ಲ. 


ಇಡಿಯಾಗಿದಕ್ಕಿದ್ದು ಯಾವುದೂ ನಮ್ಮದಲ್ಲ.
  ದಕ್ಕುವ ತನಕದ ಹೋರಾಟವೇ ಬದುಕು
      ಜೀವಿಸಿದರೆ ಮಾತ್ರವೇ ಜೀವನ.