ಬುಧವಾರ, ನವೆಂಬರ್ 14, 2012

ಹಣತೆ - ಜಿ.ಎಸ್ . ಶಿವರುದ್ರಪ್ಪ







ಹಣತೆ ಹಚ್ಚುತ್ತೇನೆ ನಾನೂ 
ಕತ್ತಲನ್ನು ಗೆದ್ದು ನಿಲ್ಲುತ್ತೇನೆಂಬ  ಜಿದ್ದಿನಿಂದಲ್ಲ 
ಲೆಕ್ಕವೇ ಇರದ ದೀಪಾವಳಿಯ ಹಡಗುಗಳೇ 
ಇದರಲ್ಲಿ ಮುಳುಗಿ ಕರಗಿರುವಾಗ 
ನಾನು ಹಚ್ಚುವ ಹಣತೆ ಶಾಶ್ವತವೆಂಬ ಭ್ರಾಂತಿ ನನಗಿಲ್ಲ 

ಹಣತೆ ಹಚ್ಚುತ್ತೇನೆ ನಾನೂ 
ಕತ್ತಲಿನಿಂದ ಬೆಳಕಿನ ಕಡೆಗೆ ನಡೆದೇನೆಂಬ ಆಸೆಯಿಂದಲ್ಲ 
ಕತ್ತಲಿನಿಂದ ಕತ್ತಲಿಗೆ ತಡಕಾಡಿಕೊಂಡು ಬಂದಿವೆ  
ಹೆಜ್ಜೆ ಶತಮಾನದಿಂದಲೂ 

ನಡು ನಡುವೆ ಒಂದಷ್ಟು ಬೆಳಕು ಬೇಕೆಂದು 
ಆಗಾಗ ಕಡ್ಡಿ ಗೀಚಿದ್ದೇವೆ, ದೀಪ ಮುಡಿಸಿದ್ದೇವೆ.
ವೇದ, ಶಾಸ್ತ್ರ , ಪುರಾಣ, ಇತಿಹಾಸ, ಕಾವ್ಯ , ವಿಜ್ಞಾನಗಳ 
ಮತಾಪು, ಪಟಾಕಿ, ಸುರುಸುರು ಬತ್ತಿ , ಹೂ ಬಾಣ ಸುಟ್ಟಿದ್ದೇವೆ
ತಮಸೋಮ ಜ್ಯೋತಿರ್ಗಮಯ  
ಎನ್ನುತ್ತಾ ಬರೀ ಬೂದಿಯನ್ನೇ ಕೊನೆಗೆ ಕಂಡಿದ್ದೇವೆ

ನನಗೂ ಗೊತ್ತು, ಕತ್ತಲೆಗೆ
ಕೊನೆಯಿರದ ಬಾಯಾರಿಕೆ.
ಎಷ್ಟೊಂದು ಬೆಳಕನ್ನು ಇದು ಉಟ್ಟರೂ, ತಿಂದರೂ
ಕುಡಿದರೂ ಇದಕ್ಕೆ ಇನ್ನೂ ಬೇಕು 
ಇನ್ನೂ ಬೇಕು ಎನ್ನುವ ಬಯಕೆ 

ಆದರೆ ಹಣತೆ ಹಚ್ಚುತ್ತೇನೆ ನಾನೂ 
ಕತ್ತಲೆಯನ್ನು ದಾಟುತ್ತೇನೆಂಬ ಭ್ರಮೆಯಿಂದಲ್ಲ 
ಇರುವಷ್ಟು ಹೊತ್ತು ನಿನ್ನ ಮುಖ ನಾನು ನಿನ್ನ  ಮುಖ ನೀನು  
ನೋಡಬಹುದೆಂಬ ಒಂದೇ ಒಂದು ಆಸೆಯಿಂದ 
ಹಣತೆ ಆರಿದ ಮೇಲೆ,  ನೀನು ಯಾರೋಮತ್ತೆ
ನಾನು ಯಾರೋ





6 ಕಾಮೆಂಟ್‌ಗಳು:

  1. ನನ್ನ ಹಣತೆ ಕವನದ ಸಾರಾಂಶ ಬೇಕಾಗಿದೆ. ಪರೀಕ್ಷೆಗಾಗಿ

    ಪ್ರತ್ಯುತ್ತರಅಳಿಸಿ
  2. ಜೀವನಾನುಭವದ ಕಡಲಿನ ಅಮೂಲ್ಯವಾದ ಮುತ್ತು ಈ ಕವನ.

    ಪ್ರತ್ಯುತ್ತರಅಳಿಸಿ