ಶನಿವಾರ, ಆಗಸ್ಟ್ 10, 2013

ನೆಲ್ಸನ್ ಮಂಡೇಲಾ - ರಂಜಾನ್ ದರ್ಗಾ


ಭೂ ಮಂಡಲದ ತುಂಬೆಲ್ಲಾ
ಹಬ್ಬಿದೆ ಹರ್ಷೋದ್ಗಾರ
ನೆಲ್ಸನ್ ಮಂಡೇಲಾ. . .

ಆತ ಮುಗುಳ್ನಗುತ್ತಾನೆ
ಮನುಷ್ಯರ ಮೇಲಿನ
ಅಪಾರ ಪ್ರೀತಿಯಿಂದ

ಜನಸಾಗರದಲ್ಲಿ ಆಗ
ಹುಟ್ಟುವುದು ಹೋರಾಟದ ಚಂಡಮಾರುತ

ಕಣ್ಣಲ್ಲಿ ಚಂದ್ರರಿದ್ದರೂ
ಹೊರ ಹೊಮ್ಮುತ್ತಿವೆ
ಪ್ರಖರ ಕಿರಣಗಳು

ವಿಜಯದ ಕೈ ಬೀಸುವಾಗ
ಹಾರುತ್ತದೆ ಸ್ವಾತಂತ್ರ್ಯದ ಹಕ್ಕಿ
ಭೂ ಮಂಡಲದ ತುಂಬ

ಆಳುವ ಬಿಳಿಯರು ಬೆಚ್ಚುವ
ಆತನ ವಾದದಲ್ಲಿ ಕಪ್ಪಿಲ್ಲ
ದ್ವೇಷಕ್ಕೆ ಮಾತ್ರ ವಿರೋಧ

ವರ್ತಮಾನ ಆತನ ಸ್ಥಾನ
ತಲ್ಲೀನನಾಗಿದ್ದಾನೆ ಎಡಗೈಯಿಂದ
ತೆರೆಯುವಲ್ಲಿ ಭವಿಷ್ಯದ ಬಾಗಿಲು

ಶತಮಾನಗಳ ಆಳದಿಂದ
ತುಂಬಿ ಬಂದ ಕೋಪ ಅದುಮಿ
ಆತ ಮಾತಾಡುವಾಗ -
ಕಿವುಡರು ಕೇಳಬಲ್ಲರು
ಕುರುಡರು ನೋಡಬಲ್ಲರು
ಕುಂಟರು ನಡೆಯಬಲ್ಲರು

ಆತ ಹೇಳುವುದಿಷ್ಟೆಃ
ಕಪ್ಪು-ಬಿಳಿ ಚರ್ಮಗಳ ಒಳಗೆ
ಮನುಷ್ಯ ಒಬ್ಬನೇ
ಎಲ್ಲ ಅಸಮಾನತೆಗಳ
ಬೂದಿಯಿಂದ ಹುಟ್ಟುವನು

ಮನುಷ್ಯ ನಿಜ