ಮಂಗಳವಾರ, ಜುಲೈ 31, 2012
ಭಾನುವಾರ, ಜೂನ್ 10, 2012
ಉಳಿದ ಸಾಲು - ಜಯಂತ್ ಕಾಯ್ಕಿಣಿ
ಕನಸಿನಲ್ಲಿ ಕಂಡ ಸಮುದ್ರ
ಕಣ್ಣಿನಲ್ಲೇ ಉಳಿಯಿತು
ಹೇಳ ಹೋದರೆ ನಂಬುವುದಿಲ್ಲ ಯಾರೂ
ಹಳೆ ಡೈರಿಯಲ್ಲಿರುವ ಮುಕ್ಕಾಲು ಪಾಲು
ನಂಬರು ಚಾಲ್ತಿಯಲ್ಲಿಲ್ಲ
ಎಲ್ಲೋ ಖಾಲಿ ಮನೆಗಳಲ್ಲಿ ಒಂಟಿ ಫೋನುಗಳು
ಭಯಾನಕವಾಗಿ ರಿಂಗಿಣಿಸುವಾಗ , ಇನ್ನೆಲ್ಲೋ
ನಡಗುವ ಕೈಗಳಲ್ಲಿ ಆಪರೇಷನ್ ಥಿಯೇಟರ್
ಫಾರ್ಮಿಗೆ ಇನ್ನ್ಯಾರೋ ಸಹಿ ಮಾಡುತ್ತಿದ್ದಾರೆ
ಸೇತುವೆಗಳು ಮೂಡುವ ಮುನ್ನ
ನದಿಯ ಎರಡೂ ತಡಿಯಲ್ಲಿ ಜನ
ತಾರಿ ದೋಣಿಗಾಗಿ ತಂಪಾಗಿ ಕಾಯುತ್ತಿದ್ದರು ಪ್ರಸನ್ನತೆಯಿಂದ
ಅನುಮಾನದ ರುಚಿ ಹಚ್ಚಿಸಿಕೊಂಡ ದೇವರು
ಮಾರುವೇಷದಲ್ಲಿ ಮದ್ಯಾಹ್ನ ಬಸ್ ಸ್ಟ್ಯಾಂಡಿನಲ್ಲಿ
ಸೀಟು ಹಿಡಿಯಲು ಕಿಟಕಿಯಿಂದ
ಗೋಗರೆಯುತ್ತ ಕರ್ಚೀಫು ಎಸೆಯುತ್ತಿದ್ದಾನೆ
ಹಣ್ಣಿನಂಗಡಿಯ ಹಳೆ ಕನ್ನಡಿಯಲ್ಲಿ
ಸಾವಿರಾರು ಬಸ್ಸುಗಳು ಹೊಕ್ಕು ಹೊರಬಂದಿವೆ
ಕೊನೆಯ ಬಸ್ಸು ಹೋದ ಮೇಲೂ ಇನ್ನೂ ಏನೋ
ಪವಾಡ ಜರುಗಲಿದೆ ಎಂಬಂತೆ ಬೆಂಚಿನಲ್ಲಿ
ಕೂತಿರುವ ಎಳೆಗಡ್ಡದ ಪೋರ ಕಣ್ಣಲ್ಲೊಂದು
ಉಜ್ವಲ ಶೂನ್ಯವನ್ನು ಹಿಡಿದುಕೊಂಡು ನೋಡುತ್ತಿದ್ದಾನೆ
ನೀವು ನನಗೆ ನಾಳೆ ಹೇಳಲಿರುವುದು ನನಗೆ
ನಿನ್ನೆಯೇ ಹೊಳೆದು ಹೋಗಿದೆ ಎಂಬಂತೆ
ನಿಮ್ಮ ಅರ್ಧ ಮರ್ಧ ಮಾತು ಕವಿತೆಗಳನ್ನು
ಪೂರ್ತಿ ಮಾಡಿಕೊಡುತ್ತೇನೆ
… ಟ್ರೈ ಮಾಡಿ ..
ಇಷ್ಟವಾಗದಿದ್ದರೆ ಸಾಲು ವಾಪಸ್ … ಎನ್ನುತ್ತಾನೆ
ಗೊತ್ತು ನೀವು ನಂಬುತ್ತಿಲ್ಲ ಎನ್ನುವಂತೆ ನಗುತ್ತಾನೆ
ನಿಗೂಢ ನಿಲ್ದಾಣಕ್ಕೆ ಒಯ್ಯಲಿರುವ ಚಾಲಕನಿಲ್ಲದ
ಬಸ್ಸಿನಂತೆ ಇರುಳು ನಮ್ಮಿಬ್ಬರ ಮೇಲೂ
ಏಕ ಕಾಲಕ್ಕೆ ಹಾಯುತ್ತಿದೆ ಗುರುವಾರ, ಏಪ್ರಿಲ್ 26, 2012
ಶಿವರಾಂ ಕಾರಂತ್ - ಮೂಕಜ್ಜಿಯ ಕನಸುಗಳು
ಭೂಮಿಯಲ್ಲಿ ಹುಟ್ಟಿದ ಎಲ್ಲರೂ ಒಟ್ಟುಗೂಡಿ ಒಂದು ದೇವರನ್ನು ಮಾಡಿಕೊಂಡಿದ್ದಾರೆ. ಅವನೇನು ಮಾಡುತ್ತಿದ್ದಾನೋ? ಯಾರ್ಯಾರು ನನ್ನನ್ನು ನಂಬುತ್ತಿದ್ದಾರೆ, ಯಾರ್ಯಾರು ನಂಬುವುದಿಲ್ಲ ಎಂದು ಹುಡುಕಿ ಹೋಗಲಾರ . ಅವನ ಚಿಂತೆಯೇ ಇಲ್ಲದ ಪ್ರಾಣಿಗಳಿಲ್ಲವೋ? ಅವುಗಳನ್ನೂ ಬದುಕಿಸಿ ಇರಿಸಿದ್ದಾನಲ್ಲ . ಅವನನ್ನು ತಿಳಿಯಬೇಕಾದರೆ ನಾವು ಅವನನ್ನು ಹುಡುಕಿದ ಹಾಗೆ ಅವನೂ ನಮ್ಮನ್ನು ಹುಡುಕಿಕೊಂಡು ಬರಬೇಕಾದುದು ಇಲ್ಲ . ನಾವೇ ಅವನಲ್ಲಿ ಪ್ರಶ್ನೆ ಕೇಳುತ್ತೇವೆ. ನಾವೇ ಅವಕ್ಕೆ ಉತ್ತರವನ್ನು ಹೇಳಿಕೊಳ್ಳುತ್ತೇವೆ. ನಮಗೆ ಇಷ್ಟ ಕಂಡಂತೆ ನಡೆದಾಗ ದೇವರ ಇಚ್ಛೆ ಅನ್ನುತ್ತೇವೆ . ಅನಿಷ್ಟ ಪ್ರಾಪ್ತಿಸಿದಾಗ ಅನಿಷ್ಟ ಎನ್ನುತ್ತೇವೆ.
ಹೆಂಡತಿ ಮಕ್ಕಳನ್ನು ಬಿಟ್ಟರು ದಾಸರು. ವಿಠಲನನ್ನು, ನಾರಾಯಣನನ್ನು ನಂಬಿ ಹಾಡಿದರು. ನಂಬಿದ್ದೆ ನಂಬಿದ್ದು ಹಾಡಿದ್ದೆ ಹಾಡಿದ್ದು . ಅವರು ತಮ್ಮ ಹೆಂಡಿರನ್ನು ದಾರಿ ಮೇಲೆ ಕೆಡೆದು ಹೋದದ್ದು ನಿಜ . ಹಾಗೆ ಮಾಡಿ ಬೇಡಿದ್ದು ಯಾರನ್ನು? ತಂತಮ್ಮ ಹೆಂಡಿರೊಡನೆ ಸುಖವಾಗಿ ವೈಕುಂಠದಲ್ಲೋ, ಕೈಲಾಸದಲ್ಲೋ ಇರುವಂಥ ವಿಷ್ಣುವನ್ನು , ಶಿವನನ್ನು. ಅವರೇನು ಕೊಟ್ಟಾರು? ಅವರಿಗೂ ಅವರ ಹೆಂಡಂದಿರಿಂದ ಮುಕ್ತಿ ಸಿಗದೇ ಇರುವಾಗ ?
ಅರ್ಜುನನಿಗೆ ಕೃಷ್ಣ ಪರಮಾತ್ಮ ಅಷ್ಟು ದೊಡ್ಡ ಭಗವದ್ಗೀತೆ ಹೇಳಿದ ಅನ್ನುತ್ತಾರೆ ; ಹೇಳಿದ್ದೆಲ್ಲಿ ? ಕುರುಕ್ಷೇತ್ರದಲ್ಲಿ ; ಧರ್ಮರಾಜ , ಕೌರವ ಯುಯುಧಾನ, ಸಾತ್ಯಕಿಗಳು ಅವರವರ ಶಂಖಗಳನ್ನು ಅವರವರು ಊದಿದ ಮೇಲೆ ಇನ್ನೇನು ? ಯುಧ್ಧ ತೊಡಗಿತು ಅನ್ನುವಾಗ ಅಲ್ಲಿ ಕೃಷ್ಣ ಮೂರು ದಿನಗಳ ಹರಿಕಥೆಯನ್ನು ಒಬ್ಬ ಅರ್ಜುನನ ಮುಂದೆ ನಡೆಸಿದ . ಅಂದರೆ ಆಗ ಉಳಿದವರೆಲ್ಲರೂ ಏನು ಮಾಡಿದರೋ ? ಯುಧ್ಧವನ್ನು ಬಿಟ್ಟು ಮನೆಗೆ ಹೋಗಿ, ತಿರುಗಿ ಅಲ್ಲೆಗೆ ಬಂದರೋ ?
‘ಆತ್ಮಕ್ಕೆ ಸಾವಿಲ್ಲ ’ ಅಂದಿದ್ದ ಕೃಷ್ಣ ‘ಅದೇನೇ ನಿಜ .ಈ ದೇಹವಲ್ಲ ’ ಅಂದ .
‘ನೀನು ಕೊಲ್ಲುವುದಲ್ಲ , ಮಾಡುವುದಲ್ಲ ’ ಅಂದ .
ಇದೆಲ್ಲ ಲೆಕ್ಕಾಚಾರ ಸಮವೇ.
‘ನೀನು ನಿನ್ನ ಕರ್ಮ ಮಾಡು ; ಅದರ ಫಲವನ್ನು ಅಪೇಕ್ಷಿಸಬೇಡ ’ ಅಂದ .
ನೀನು ಯುಧ್ಧದಲ್ಲಿ ಕೊಂದರೆ, ಸತ್ತರೆ ನಿನಗೆ ಸ್ವರ್ಗ ಪ್ರಾಪ್ತಿಯಾಗುತ್ತದೆ ‘ ಅಂದ ಅವನೇ .
‘ಸ್ವರ್ಗದ ಅಪೇಕ್ಷೆ ಮಾಡುವುದು ತಪ್ಪು' ಎಂದದ್ದೂ ಅವನೇನೇ .
‘ಕಾಮ -ಕ್ರೋಧಗಳು ಕೆಟ್ಟದ್ದು ’ ಎಂದವನು ಅವನೇ ; ‘ಕೋಪಕ್ಕೆ ಬಲಿಯಾಗಿ ಬಾಣಬಿಡು ‘ ಎಂದವ ಅವನೇ .
‘ದೇಹ ಮುಖ್ಯವಲ್ಲ ’ ಅಂದವನೂ ಅವನೇ ; ‘ಕೌರವರ ದೇಹವನ್ನು ಕೊಲ್ಲು ‘ ಎಂದವ ಅವನೇ .
‘ಆತ್ಮಕ್ಕೆ ಕಳಂಕವಿಲ್ಲ ’ ಎಂದವನೂ ಅವನೇ ; ‘ನೀನು ಯುಧ್ಧ ಮಾಡದೆ ಬಿಟ್ಟರೆ ನಿನ್ನ ಕುಲಕ್ಕೆ ಅಪಕೀರ್ತಿ ಬರುತ್ತದೆ ’ ಎಂದವ ಅವನೇ .
ಒಂದೇ ಗಂಟಲಲ್ಲಿ ಇವನ್ನೆಲ್ಲ ನುಂಗುವುದು ತುಂಬ ಕಷ್ಟವಲ್ಲವೇ?
ಅವು ಮಾತಿನ ಚಮತ್ಕಾರಗಳೆನೋ ಹೌದು . ಅದರಲ್ಲಿ ನಂಬಿಕೆ ಹುಟ್ಟುವುದಿಲ್ಲ ನನಗೆ .
ದೇವರು (?) ಕೊಟ್ಟ ಆಯುಷ್ಯವನ್ನು ಇದ್ದಷ್ಟು ಕಾಲ ಉಳಿದ ಮಕ್ಕಳ ಜೊತೆ ಬಾಳಿ ಬದುಕುವುದೇ ಪೂಜೆ ಎಂಬ ಬುಧ್ಧಿ ಯಾಕೆ ಬರಬಾರದು ನಮಗೆ ?
ಶನಿವಾರ, ಮಾರ್ಚ್ 31, 2012
ಅವ್ವ - ಪಿ. ಲಂಕೇಶ್.
ನನ್ನವ್ವ ಫಲವತ್ತಾದ ಕಪ್ಪು ನೆಲ
ಅಲ್ಲಿ ಹಸಿರು ಪತ್ರದ ಹರವು, ಬಿಳಿಯ ಹೂ ಹಬ್ಬ;
ಸುಟ್ಟಷ್ಟು ಕಸವು, ನೊಂದಷ್ಟು ಹೂ ಹಣ್ಣು
ಮಕ್ಕಳೊದ್ದರೆ ಅವಳ ಅಂಗಾಂಗ ಪುಳಕ
ಹೊತ್ತ ಬುಟ್ಟಿಯ ಇಟ್ಟು ನರಳಿ
ಎವೆ ಮುಚ್ಚಿದಳು, ತೆರೆಯದಂತೆ.
ಪಲ್ಲ ಜೋಳವ ಎತ್ತಿ ಅಪ್ಪನ್ನ ಮೆಚ್ಚಿಸಿ ತೋಳ ಬಂದಿಯ ಗೆದ್ದು ,
ಹೆಂಟೆಗೊಂದು ಮೊಗೆ ನೀರು ಹಿಗ್ಗಿ;
ಮೆಣಸು, ಅವರೆ, ಜೋಳ, ತೊಗರಿಯ ಹೊಲವ ಕೈಯಲ್ಲಿ ಉತ್ತು
ಹೂವಲ್ಲಿ ಹೂವಾಗಿ ಕಾಯಲ್ಲಿ ಕಾಯಾಗಿ
ಹೆಸರು ಗದ್ದೆಯ ನೋಡಿಕೊಂಡು
ಯೌವ್ವನವ ಕಳೆದಳು ಚಿಂದಿಯ ಸೀರೆ ಉಟ್ಟಿಕೊಂಡು.
ಸತ್ತಳು ಈಕೆ;
ಬಾಗು ಬೆನ್ನಿನ ಮುದುಕಿಗೆಷ್ಟು ಪ್ರಾಯ?
ಎಷ್ಟುಗಾದಿಯ ಚಂದ್ರ , ಒಲೆಯೆದುರು ಹೋಳಿಗೆಯ ಸಂಭ್ರಮ;
ಎಷ್ಟು ಸಲ ಈ ಮುದುಕಿ ಅತ್ತಳು ಕಾಸಿಗೆ, ಕೆಟ್ಟ ಪೈರಿಗೆ, ಸತ್ತ ಕರುವಿಗೆ;
ಎಷ್ಟು ಸಲ ಹುಡುಕುತ್ತ ಊರೂರು ಅಲೆದಳು
ತಪ್ಪಿಸಿಕೊಂಡ ಮುದಿಯ ಎಮ್ಮೆಗೆ?
ಸತಿ, ಸಾವಿತ್ರಿ, ಜಾನಕಿ, ಊರ್ಮಿಳೆಯಲ್ಲ;
ಚರಿತ್ರೆ ಪುಸ್ತಕದ ಶಾಂತ, ಶ್ವೇತ, ಗಂಭೀರೆಯಲ್ಲ ;
ಗಾಂಧೀಜಿ, ರಾಮಕೃಷ್ಣರ ಸತಿಯರಂತಲ್ಲ;
ಮುತ್ತೈದೆಯಾಗಿ ಕುಂಕುಮ ಕೂಡ ಇಡಲಿಲ್ಲ.
ಬನದ ಕರಡಿಯ ಹಾಗೆ ಚಿಕ್ಕ ಮಕ್ಕಳ ಹೊತ್ತು
ಗಂಡನ್ನ ಸಾಕಿದಳು ಕಾಸು ಗಂಟಿಕ್ಕಿದಳು
ನೊಂದ ನಾಯಿಯ ಹಾಗೆ ಬೈದು, ಗೊಣಗಿ, ಗುದ್ದಾಡಿದಳು.
ಸಣ್ಣತನ, ಕೊಂಕು, ಕೆರೆದಾಟ ಕೋತಿಯ ಹಾಗೆ;
ಎಲ್ಲಕ್ಕೆ ಮನೆತನದ ಉದ್ಧಾರ ಸೂತ್ರ ;
ಈಕೆ ಉರಿದೆದ್ದಾಳು ಮಗ ಕೆಟ್ಟರೆ, ಗಂಡ ಬೇರೆ ಕಡೆ ಹೋದಾಗ ಮಾತ್ರ .
ಬನದ ಕರಡಿಗೆ ನಿಮ್ಮ ಭಗವದ್ಗೀತೆ ಬೇಡ ;
ನನ್ನವ್ವ ಬದುಕಿದ್ದು ಕಾಳು ಕಡ್ಡಿಗೆ, ದುಡಿತಕ್ಕೆ, ಮಕ್ಕಳಿಗೆ;
ಮೇಲೊಂದು ಸೂರು. ಅನ್ನ, ರೊಟ್ಟಿ, ಹಚಡಕ್ಕೆ
ಸರೀಕರ ಎದುರು ತಲೆಯೆತ್ತಿ ನಡಿಯಲಿಕ್ಕೆ
ಇವಳಿಗೆ ಮೆಚ್ಚುಗೆ, ಕೃತಜ್ಞತೆಯ ಕಣ್ಣೀರು ;
ಹೆತ್ತದಕ್ಕೆ, ಮಣ್ಣಲ್ಲಿ ಬದುಕಿ
ಮನೆಯಿಂದ ಹೊಲಕ್ಕೆ ಹೋದಂತೆ
ತಣ್ಣಗೆ ಮಾತಾಡುತ್ತಲೇ ಹೊರಟು ಹೋದುದಕ್ಕೆ
ಇದಕ್ಕೆ ಸಬ್ಸ್ಕ್ರೈಬ್ ಆಗಿ:
ಪೋಸ್ಟ್ಗಳು (Atom)




