ನೆನಹು ಬಾಳಿನ ಬುತ್ತಿ; ಅನುಭವಗಳ ಅಕ್ಷಯ ನಿಧಿ. ಜೀವನಯಾತ್ರೆ ಬೇಸರವಾದಾಗ, ಜೀವನದಲ್ಲಿ ನವೀನತೆ ಮೊಳೆಯದೆ ಮಂಕು ಕವಿದಾಗ, ಜೀವನದಲ್ಲಿ ಬಿಸಿಲ ಬೇಗೆ ಹೆಚ್ಚಿ ಬಳಲಿದಾಗ, ಹಾದಿಯ ಬಳಿ ದಟ್ಟವಾಗಿ ಸೊಂಪಿಡಿದು ಬೆಳೆದು ಮರದ ತನ್ನೆಳಲಿನ ತಂಪಿನಲ್ಲಿ ಮೊರೆದು ಹರಿಯುವ ತೊರೆಯ ಮಂಜುಳ ನಾದವನ್ನು ಆಲಿಸುತ್ತ ಆ ಬುತ್ತಿಯನ್ನು ಬಿಚ್ಚಿ ಉಣಬಹುದು. ತಣಿಯಬಹುದು.ದಣಿವಾರಿಸಿಕೊಳ್ಳಬಹುದು.ನಮಗೆ ಬೇಕಾದವರು ನಮ್ಮ ಜೀವನಾನುಭಾವಗಳಲ್ಲಿ ಒಲಮೆ ಉಳ್ಳವರು ಬಳಿಯಿದ್ದರೆ ಅವರಿಗೂ ಆ ಬುತ್ತಿಯ ಪರಿಚಯ ಮಾಡಿಕೊಟ್ಟು ಒಂಟಿಯಾಗಿ ಅನುಭವಿಸುವ ಸುಖವನ್ನು ಇಮ್ಮಡಿಯಾಗಿ ಅನುಭವಿಸಬಹುದು. ಆಲಿಸುವವರಲ್ಲಿ ತಾತ್ಸಾರವಾಗಲಿ , ವ್ಯಂಗ್ಯ ಪರಿಹಾಸ್ಯವಾಗಲಿ , ಜಿಹ್ವಾಸೆಯಾಗಲಿ , ಜಿಗುಪ್ಸೆಯಾಗಲಿ ತೋರಿಬಂದರೆ ಬಾಯಿ ಮುಚ್ಚಿಕೊಂಡು ಮನದಲ್ಲಿಯೇ ಬುತ್ತಿಯೂಟ ಮಾಡಬಹುದು.
ಆ ಬುತ್ತಿಯಲ್ಲಿ ಸುಖಗಳಂತೆ ಕಷ್ಟಗಳೂ ಮನೆ ಮಾಡಿಕೊಂಡಿರುತ್ತವೆ . ಆದರೆ ಕಳೆದ ಕಾಲವು ಸ್ಮೃತಿಯ ವಜ್ರ ಪಂಜರದಲ್ಲಿ ಆ ಅನುಭವಗಳನ್ನು ಬಂಧಿಸಿರುವುದರಿಂದ ನಮಗೆ ಅವುಗಳ ಭಯಂಕರತೆ ಗಿಂತಲೂ ಮನೋಹರತೆಯೇ ಹೆಚ್ಚಾಗಿ ಎದೆ ಮುಟ್ಟುತ್ತದೆ . ಮೃಗಶಾಲೆಯಲ್ಲಿ ಪಂಜರದೊಳಗಿರುವ ಹುಲಿಯನ್ನೂ ಗಿಳಿಯನ್ನೂ ನಾವು ನಿರ್ಭರತೆಯಿಂದ ನೋಡಿ ಆನಂದ ಪಡುವಂತೆ ಕಾಲಪಂಜರದಲ್ಲಿ ಸಿಕ್ಕಿ ಬಿದ್ದ ಕಷ್ಟ ಸುಖನುಭಾವಗಳನ್ನು ಸಮದೃಷ್ಟಿಯಿಂದ ನೋಡಲು ಸಮರ್ಥರಾಗುತ್ತೇವೆ . ಒಂದು ವೇಳೆ ನಡುಗಿದರೂ ಬಿಸುಸುಯ್ದರೂ ಕಂಬನಿಗರೆದರೂ ರಂಗಭೂಮಿಯಲ್ಲಿ ರುದ್ರನಾಟಕಗಳನ್ನು ನೋಡಿ ದುಖಪತ್ತರೂ ಆನಂದ ಪಡುವಂತೆ ಆಗುತ್ತದೆಯೇ ಹೊರತು ಕಷ್ಟಗಳನ್ನು ಸಾಕ್ಷಾತ್ತಾಗಿ ಅನುಭವಿಸಿದಂತೆ ಉಗ್ರವಾಗುವುದಿಲ್ಲ . ಆದ್ದರಿಂದ ನೆನಪಿನಲ್ಲಿ ಒಂದು ತೆರನಾದ ನಿಷ್ಕಾಮತೆಯೂ ಶಾಂತಿಯೂ ಇರುತ್ತದೆ .

.jpg)