ಮಂಗಳವಾರ, ಸೆಪ್ಟೆಂಬರ್ 11, 2012

ಜೋಗಿ



        ಮನಸ್ಸೆಂಬ ಸಮುದ್ರ ಬೇಡದ ಯೋಚನೆಗಳನ್ನು ಬುದ್ಧಿ ತೀರಕ್ಕೆ ತಂದು ಎಸೆಯುತ್ತದೆ. ಹಿಂತಿರುಗಿ ನೋಡಿದರೆ ರಸಹೀನ ಕಬ್ಬಿನ ಜಲ್ಲೆಯಂತೆ ನಿನ್ನೆಗಳ ರಾಶಿ. ಮುಂದಕ್ಕೆ ನೋಡಿದರೆ ಚಾಚಿಕೊಂಡ ಮೂರು ದಾರಿಗಳು. ಬದುಕು ಒಡಂಬಡಿಕೆಯಲ್ಲಿದೆಯೋ, ಈಡೇರಿಕೆಯಲ್ಲಿದೆಯೋ ಎಂಬ ದ್ವಂದ್ವ ನಮ್ಮದು. ಬದುಕಿಗೆ ಉದ್ದೇಶಗಳೇ ಇಲ್ಲ. ಜೀವಮಾನ ಪೂರ್ತಿ ಕ್ಷಣಕ್ಕೋಸ್ಕರ ಕಾಯುತ್ತಿದ್ದೆ ಅನ್ನಿಸುವಂತ ಕ್ಷಣವೊಂದು ಥಟ್ಟನೆ ಹಾಜರಾಗಿ ಬಿಟ್ಟರೆ ಅಲ್ಲಿಗೆ ಮುಕ್ತಿ. ಜ್ಞಾನೋದಯ ಆಗುವತನಕ ಮಾತ್ರ ಹುಡುಕಾಟ ಒಮ್ಮೆ ಅರಿವು ಬೆಳಕಾದರೆ ಆಮೇಲೆ ಅರಿವೇ ಇರುವುದಿಲ್ಲ.

            ಸಂತೋಷವೇ ಬೇರೆ ರೋಚಕತೆಯೇ ಬೇರೆ. ಸಮೂಹದಲ್ಲಿ ಸವಿಯಬಹುದಾದದ್ದು ರೋಚಕತೆ, ಸಂಭ್ರಮ. ಏಕಾಂತದಲ್ಲಿ ಸವಿಯ ಬಹುದಾದದ್ದು ಖುಷಿ.

ಹತ್ತಿರವಾದದ್ದು ನೀರಸವೂ, ದೂರದಲ್ಲಿದ್ದುದು ಆಕರ್ಷಣೆಯೂ ಆಗಿ ಕಾಣುತ್ತದೆ.

          ಸಾವು ಯಾವತ್ತಿದ್ದರೂ ಭಯ ಮತ್ತು ಆಕರ್ಷಣೆ. ಬದುಕು ನಮ್ಮ ಜೊತೆಗಿದ್ದರೂ ಅಪರಿಚಿತ. ನಮಗೆ ನಮ್ಮ ಸತ್ತ-ಬದುಕಷ್ಟೆ ಗೊತ್ತು. ಅಂದರೆ ನಿನ್ನೆಗಳು ಗೊತ್ತು. ಬದುಕುವ ಕ್ಷಣದ ಬಗ್ಗೆ ಗೊತ್ತಿಲ್ಲ. 


ಇಡಿಯಾಗಿದಕ್ಕಿದ್ದು ಯಾವುದೂ ನಮ್ಮದಲ್ಲ.
  ದಕ್ಕುವ ತನಕದ ಹೋರಾಟವೇ ಬದುಕು
      ಜೀವಿಸಿದರೆ ಮಾತ್ರವೇ ಜೀವನ.


ಭಾನುವಾರ, ಆಗಸ್ಟ್ 26, 2012

ಬೀchi- ನನ್ನ ಭಯಾಗ್ರಫಿ



 ಪ್ರತಿಯೊಬ್ಬನ ಬಾಳಿನ ಕತೆಯೂ ಒಂದು ಅತ್ಯುತ್ತಮ ಚರಿತ್ರೆಯಾಗುತ್ತದೆ. ಬರೆಯುವ ಹದವನ್ನು ಬಲ್ಲವನಿಗೆ ಬಾಳೇ ಒಂದು ಕಲೆ. ಅದನ್ನು ಮಸಿಯಲ್ಲಿ ಮೂಡಿಸುವುದು ಸೂಕ್ಷ್ಮಕಲೆ, ಕುಸುರಿನ ಕೆಲಸ.

ಮೂರ್ಖನು ತನ್ನ ಅನುಭವದಿಂದ ಕಲಿಯುತ್ತಾನೆ. ಜಾಣನು ಮೂರ್ಖನ ಅನುಭವದಿಂದ ಕಲಿಯುತ್ತಾನೆ. ನನ್ನ ತಪ್ಪೊಪ್ಪುಗಳು ಮುಂದಿನ ಪೀಳಿಗೆಗೆ ಪಾಠವಾಗಲಿ ಎಂಬುದೆ ನನ್ನಾಸೆ. ಹಿಂದಿನವರ ತಪ್ಪುಗಳನ್ನು ಅರಿತು ಮುಂದಿನವರು ಹೆಜ್ಜೆ ಇಟ್ಟರೆ ಒಳಿತಲ್ಲವೆ? ಹಳಬರ ಬಾಳು ಹೊಸ ಜೀವ ಸಸಿಗೆ ಗೊಬ್ಬರ.

ಸಂಪ್ರದಾಯ ಎಂಬುದು ಒಂದು ದಾರಿಯನ್ನು ತೊರಿಸುತ್ತದೆ ಮಾತ್ರ, ಬೆತ್ತವನ್ನು ಹಿಡಿದು ನಿಂತು ದಿಕ್ಕಿಗೆ ಹೋಗು ಎಂದು ಹೇಳುವ ಅಧಿಕಾರ ಅದಕ್ಕಿಲ್ಲ.

ಮಾನವ ತನ್ನ ದೌರ್ಬಲ್ಯದ ಪರಿಣಾಮವಾಗಿ ದೇವರನ್ನು ಸೃಷ್ಟಿಸಿಕೊಂಡ. ದೇವರಿಂದಲೇ ತನ್ನ ಸೃಷ್ಟಿಯಾಯಿತೆಂದು ಆರೋಪಿಸಿದ. ಅದೇ ದೇವರು ತನ್ನ ಸೃಷ್ಟಿಯ ಪ್ರಾಣಗಳನ್ನು  ಶಿಕ್ಷಿಸುತ್ತಾನೆ, ಇನಾಮು ಕೊಡುತ್ತಾನೆ ಎಂಬುದನ್ನು ನಾನೊಪ್ಪಲಾರೆ. ದೇಹವು ಬಿದ್ದು ಹೋದ ನಂತರ ಮನುಷ್ಯ ಇನ್ನೂ ಇರುತ್ತಾನೆ ಎಂಬುದನ್ನು ನಾ ನಂಬಲಾರೆ. ಭಾವನೆಗೆ ಕಾರಣ ಮಾನವನಲ್ಲಿಯ ಭಯ ಅಥವಾ ಅಹಂಕಾರ.

ಒಬ್ಬನು ಸತ್ತ ನಂತರ ಉಳಿಯುವುದೇನು? ಚರಿತ್ರೆ ಪುಸ್ತಕದಲ್ಲಿ ಅವನ ಬಗ್ಗೆ ನಾಲ್ಕು ಪುಟಗಳು, ಮುಂದಿನ ಪೀಳಿಗೆ ಇವನ ಮೂರ್ಖತನವನ್ನು ಕಂಡು ನಗಲೆಂದು

ಯಾವನ ಬಾಳೂ ಬಾಳಲಾರದಷ್ಟು ಬಾಳಬಾರದಷ್ಟು ಕಷ್ಟವಲ್ಲ. ಕನಿಷ್ಠವೂ ಅಲ್ಲ.   ಬಾಳಿನಿಂದ ಓಡಿಹೋಗಬೇಡ. ಅದನ್ನು ಇದಿರಿಸು. ಅದನ್ನೇ ಬಾಳು. ನಿನ್ನ ಬಾಳು ನಿನ್ನಷ್ಟು ಕೆಡುಕಲ್ಲ. ಅದನ್ನು ಪ್ರೀತಿಸು. ಪ್ರೀತಿ ನಿನ್ನ ಬಾಳ ಹೊರೆಯನ್ನು ಹಗುರ ಮಾಡುತ್ತದೆ. ನಿನ್ನ ಹೃದಯದಲ್ಲಿ ದ್ವೇಷಕ್ಕೆ ಮಾತ್ರ ಎಂದೂ ಇಂಬು ಕೊಡಬೇಡ. ಪ್ರೇಮವೇ ಬೆಳಕು. ದ್ವೇಷವೇ ಕತ್ತಲು. ನೀನೇ ಸೃಷ್ಟಿಸಿಕೊಂಡ ಕತ್ತಲಲ್ಲಿ ನೀನೇ ದಾರಿ ತಪ್ಪೀಯಾ ! ಎಡವಿ ಬಿದ್ದೀಯಾ, ಎಚ್ಚರಿಕೆ!!! 

ಮಂಗಳವಾರ, ಜುಲೈ 31, 2012

ಕುವೆ೦ಪು - ಮಲೆಗಳಲ್ಲಿ ಮದುಮಗಳು

ಇಲ್ಲಿ
   ಯಾರೂ ಮುಖ್ಯರಲ್ಲ ;
   ಯಾರೂ ಅಮುಖ್ಯರಲ್ಲ;
   ಯಾವುದೂ ಯಃಕಶ್ಚಿತವಲ್ಲ…!

ಇಲ್ಲಿ
   ಯಾವುದಕ್ಕೂ ಮೊದಲಿಲ್ಲ
   ಯಾವುದಕ್ಕೂ ತುದಿಯಿಲ್ಲ
   ಯಾವುದೂ ಎಲ್ಲಿಯೂ ನಿಲ್ಲುವುದೂ ಇಲ್ಲ
   ಕೊನೆ ಮುಟ್ಟುವುದು ಇಲ್ಲ

ಇಲ್ಲಿ
   ಅವಸರವೂ ಸಾವಧಾನದ ಬೆನ್ನೇರಿದೆ.

ಇಲ್ಲಿ
   ಎಲ್ಲಕ್ಕೂ ಇದೆ ಅರ್ಥ
   ಯಾವುದೂ ಅಲ್ಲ ವ್ಯರ್ಥ
   ನೀರೆಲ್ಲವೂ ತೀರ್ಥ.

                                                                               (ಮುನ್ನುಡಿಯಿ೦ದ ಕದ್ದಿದ್ದು)

ಭಾನುವಾರ, ಜೂನ್ 10, 2012

ಉಳಿದ ಸಾಲು - ಜಯಂತ್ ಕಾಯ್ಕಿಣಿ



ಕನಸಿನಲ್ಲಿ  ಕಂಡ  ಸಮುದ್ರ 
ಕಣ್ಣಿನಲ್ಲೇ  ಉಳಿಯಿತು 
ಹೇಳ  ಹೋದರೆ  ನಂಬುವುದಿಲ್ಲ  ಯಾರೂ 

ಹಳೆ  ಡೈರಿಯಲ್ಲಿರುವ ಮುಕ್ಕಾಲು  ಪಾಲು 
ನಂಬರು  ಚಾಲ್ತಿಯಲ್ಲಿಲ್ಲ 
ಎಲ್ಲೋ  ಖಾಲಿ  ಮನೆಗಳಲ್ಲಿ  ಒಂಟಿ  ಫೋನುಗಳು 
ಭಯಾನಕವಾಗಿ  ರಿಂಗಿಣಿಸುವಾಗ  , ಇನ್ನೆಲ್ಲೋ 
ನಡಗುವ ಕೈಗಳಲ್ಲಿ  ಆಪರೇಷನ್   ಥಿಯೇಟರ್ 
ಫಾರ್ಮಿಗೆ  ಇನ್ನ್ಯಾರೋ    ಸಹಿ  ಮಾಡುತ್ತಿದ್ದಾರೆ 

ಸೇತುವೆಗಳು  ಮೂಡುವ  ಮುನ್ನ 
ನದಿಯ  ಎರಡೂ  ತಡಿಯಲ್ಲಿ  ಜನ 
ತಾರಿ ದೋಣಿಗಾಗಿ  ತಂಪಾಗಿ  ಕಾಯುತ್ತಿದ್ದರು  ಪ್ರಸನ್ನತೆಯಿಂದ 
ಅನುಮಾನದ  ರುಚಿ  ಹಚ್ಚಿಸಿಕೊಂಡ  ದೇವರು 
ಮಾರುವೇಷದಲ್ಲಿ  ಮದ್ಯಾಹ್ನ  ಬಸ್  ಸ್ಟ್ಯಾಂಡಿನಲ್ಲಿ 
ಸೀಟು  ಹಿಡಿಯಲು  ಕಿಟಕಿಯಿಂದ  
ಗೋಗರೆಯುತ್ತ  ಕರ್ಚೀಫು  ಎಸೆಯುತ್ತಿದ್ದಾನೆ 

ಹಣ್ಣಿನಂಗಡಿಯ ಹಳೆ  ಕನ್ನಡಿಯಲ್ಲಿ 
ಸಾವಿರಾರು  ಬಸ್ಸುಗಳು  ಹೊಕ್ಕು  ಹೊರಬಂದಿವೆ 
ಕೊನೆಯ  ಬಸ್ಸು  ಹೋದ  ಮೇಲೂ  ಇನ್ನೂ  ಏನೋ 
ಪವಾಡ  ಜರುಗಲಿದೆ   ಎಂಬಂತೆ ಬೆಂಚಿನಲ್ಲಿ 
ಕೂತಿರುವ  ಳೆಗಡ್ಡದ  ಪೋರ  ಕಣ್ಣಲ್ಲೊಂದು 
ಉಜ್ವಲ   ಶೂನ್ಯವನ್ನು  ಹಿಡಿದುಕೊಂಡು  ನೋಡುತ್ತಿದ್ದಾನೆ 
  
ನೀವು  ನನಗೆ  ನಾಳೆ  ಹೇಳಲಿರುವುದು  ನನಗೆ 
ನಿನ್ನೆಯೇ  ಹೊಳೆದು   ಹೋಗಿದೆ  ಎಂಬಂತೆ 
ನಿಮ್ಮ  ಅರ್ಧ  ಮರ್ಧ  ಮಾತು  ಕವಿತೆಗಳನ್ನು 
ಪೂರ್ತಿ  ಮಾಡಿಕೊಡುತ್ತೇನೆ  … ಟ್ರೈ  ಮಾಡಿ ..
ಇಷ್ಟವಾಗದಿದ್ದರೆ  ಸಾಲು  ವಾಪಸ್ … ಎನ್ನುತ್ತಾನೆ 
ಗೊತ್ತು  ನೀವು  ನಂಬುತ್ತಿಲ್ಲ  ಎನ್ನುವಂತೆ  ನಗುತ್ತಾನೆ 

ನಿಗೂಢ  ನಿಲ್ದಾಣಕ್ಕೆ  ಒಯ್ಯಲಿರುವ  ಚಾಲಕನಿಲ್ಲದ 
ಬಸ್ಸಿನಂತೆ  ಇರುಳು  ನಮ್ಮಿಬ್ಬರ  ಮೇಲೂ 
ಏಕ  ಕಾಲಕ್ಕೆ  ಹಾಯುತ್ತಿದೆ   

ಗುರುವಾರ, ಏಪ್ರಿಲ್ 26, 2012

ಶಿವರಾಂ ಕಾರಂತ್ - ಮೂಕಜ್ಜಿಯ ಕನಸುಗಳು



ಭೂಮಿಯಲ್ಲಿ   ಹುಟ್ಟಿದ  ಎಲ್ಲರೂ   ಒಟ್ಟುಗೂಡಿ  ಒಂದು  ದೇವರನ್ನು  ಮಾಡಿಕೊಂಡಿದ್ದಾರೆ.  ಅವನೇನು  ಮಾಡುತ್ತಿದ್ದಾನೋ? ಯಾರ್ಯಾರು  ನನ್ನನ್ನು  ನಂಬುತ್ತಿದ್ದಾರೆ, ಯಾರ್ಯಾರು  ನಂಬುವುದಿಲ್ಲ  ಎಂದು ಹುಡುಕಿ  ಹೋಗಲಾರ .  ಅವನ  ಚಿಂತೆಯೇ  ಇಲ್ಲದ   ಪ್ರಾಣಿಗಳಿಲ್ಲವೋ? ಅವುಗಳನ್ನೂ ಬದುಕಿಸಿ ಇರಿಸಿದ್ದಾನಲ್ಲ . ಅವನನ್ನು ತಿಳಿಯಬೇಕಾದರೆ ನಾವು  ಅವನನ್ನು  ಹುಡುಕಿದ  ಹಾಗೆ  ಅವನೂ  ನಮ್ಮನ್ನು ಹುಡುಕಿಕೊಂಡು  ಬರಬೇಕಾದುದು  ಇಲ್ಲ . ನಾವೇ  ಅವನಲ್ಲಿ  ಪ್ರಶ್ನೆ   ಕೇಳುತ್ತೇವೆ. ನಾವೇ  ಅವಕ್ಕೆ ಉತ್ತರವನ್ನು  ಹೇಳಿಕೊಳ್ಳುತ್ತೇವೆ. ನಮಗೆ  ಇಷ್ಟ  ಕಂಡಂತೆ  ನಡೆದಾಗ  ದೇವರ  ಇಚ್ಛೆ   ಅನ್ನುತ್ತೇವೆ .  ಅನಿಷ್ಟ  ಪ್ರಾಪ್ತಿಸಿದಾಗ  ಅನಿಷ್ಟ  ಎನ್ನುತ್ತೇವೆ.

ಹೆಂಡತಿ  ಮಕ್ಕಳನ್ನು  ಬಿಟ್ಟರು  ದಾಸರು. ವಿಠಲನನ್ನು, ನಾರಾಯಣನನ್ನು  ನಂಬಿ  ಹಾಡಿದರು. ನಂಬಿದ್ದೆ  ನಂಬಿದ್ದು  ಹಾಡಿದ್ದೆ  ಹಾಡಿದ್ದು . ಅವರು  ತಮ್ಮ  ಹೆಂಡಿರನ್ನು  ದಾರಿ  ಮೇಲೆ  ಕೆಡೆದು ಹೋದದ್ದು ನಿಜ  . ಹಾಗೆ ಮಾಡಿ  ಬೇಡಿದ್ದು   ಯಾರನ್ನು? ತಂತಮ್ಮ  ಹೆಂಡಿರೊಡನೆ  ಸುಖವಾಗಿ  ವೈಕುಂಠದಲ್ಲೋ, ಕೈಲಾಸದಲ್ಲೋ  ಇರುವಂಥ  ವಿಷ್ಣುವನ್ನು , ಶಿವನನ್ನು. ಅವರೇನು ಕೊಟ್ಟಾರು? ಅವರಿಗೂ  ಅವರ   ಹೆಂಡಂದಿರಿಂದ  ಮುಕ್ತಿ   ಸಿಗದೇ  ಇರುವಾಗ ?

ಅರ್ಜುನನಿಗೆ  ಕೃಷ್ಣ   ಪರಮಾತ್ಮ  ಅಷ್ಟು   ದೊಡ್ಡ   ಭಗವದ್ಗೀತೆ  ಹೇಳಿದ   ಅನ್ನುತ್ತಾರೆ ; ಹೇಳಿದ್ದೆಲ್ಲಿ ? ಕುರುಕ್ಷೇತ್ರದಲ್ಲಿ ; ಧರ್ಮರಾಜ , ಕೌರವ  ಯುಯುಧಾನ, ಸಾತ್ಯಕಿಗಳು  ಅವರವರ ಶಂಖಗಳನ್ನು  ಅವರವರು  ಊದಿದ  ಮೇಲೆ  ಇನ್ನೇನು ? ಯುಧ್ಧ ತೊಡಗಿತು  ಅನ್ನುವಾಗ   ಅಲ್ಲಿ   ಕೃಷ್ಣ    ಮೂರು  ದಿನಗಳ  ಹರಿಕಥೆಯನ್ನು  ಒಬ್ಬ  ಅರ್ಜುನನ  ಮುಂದೆ  ನಡೆಸಿದ . ಅಂದರೆ  ಆಗ  ಉಳಿದವರೆಲ್ಲರೂ  ಏನು  ಮಾಡಿದರೋ ? ಯುಧ್ಧವನ್ನು  ಬಿಟ್ಟು  ಮನೆಗೆ  ಹೋಗಿ, ತಿರುಗಿ  ಅಲ್ಲೆಗೆ  ಬಂದರೋ ?

ಆತ್ಮಕ್ಕೆ  ಸಾವಿಲ್ಲ ’ ಅಂದಿದ್ದ  ಕೃಷ್ಣ    ‘ಅದೇನೇ  ನಿಜ .   ದೇಹವಲ್ಲ ’ ಅಂದ   .
ನೀನು  ಕೊಲ್ಲುವುದಲ್ಲ , ಮಾಡುವುದಲ್ಲ ’ ಅಂದ .
 ಇದೆಲ್ಲ  ಲೆಕ್ಕಾಚಾರ  ಸಮವೇ.

 ‘ನೀನು  ನಿನ್ನ  ಕರ್ಮ  ಮಾಡು  ; ಅದರ  ಫಲವನ್ನು  ಅಪೇಕ್ಷಿಸಬೇಡ ’ ಅಂದ .
 ನೀನು  ಯುಧ್ಧದಲ್ಲಿ  ಕೊಂದರೆ, ಸತ್ತರೆ  ನಿನಗೆ  ಸ್ವರ್ಗ  ಪ್ರಾಪ್ತಿಯಾಗುತ್ತದೆ  ‘ ಅಂದ  ಅವನೇ .
ಸ್ವರ್ಗದ  ಅಪೇಕ್ಷೆ  ಮಾಡುವುದು  ತಪ್ಪು' ಎಂದದ್ದೂ  ಅವನೇನೇ .

ಕಾಮ  -ಕ್ರೋಧಗಳು  ಕೆಟ್ಟದ್ದು ’ ಎಂದವನು  ಅವನೇ ; ‘ಕೋಪಕ್ಕೆ  ಬಲಿಯಾಗಿ  ಬಾಣಬಿಡುಎಂದವ  ಅವನೇ .

ದೇಹ  ಮುಖ್ಯವಲ್ಲ ’ ಅಂದವನೂ ಅವನೇ ; ‘ಕೌರವರ  ದೇಹವನ್ನು  ಕೊಲ್ಲು  ‘ ಎಂದವ  ಅವನೇ .

ಆತ್ಮಕ್ಕೆ  ಕಳಂಕವಿಲ್ಲ  ’ ಎಂದವನೂ  ಅವನೇ  ; ‘ನೀನು  ಯುಧ್ಧ  ಮಾಡದೆ  ಬಿಟ್ಟರೆ  ನಿನ್ನ  ಕುಲಕ್ಕೆ  ಅಪಕೀರ್ತಿ  ಬರುತ್ತದೆ ’ ಎಂದವ  ಅವನೇ .

ಒಂದೇ   ಗಂಟಲಲ್ಲಿ   ಇವನ್ನೆಲ್ಲ   ನುಂಗುವುದು   ತುಂಬ  ಕಷ್ಟವಲ್ಲವೇ?
ಅವು  ಮಾತಿನ  ಚಮತ್ಕಾರಗಳೆನೋ ಹೌದು . ಅದರಲ್ಲಿ  ನಂಬಿಕೆ  ಹುಟ್ಟುವುದಿಲ್ಲ  ನನಗೆ .



ದೇವರು (?) ಕೊಟ್ಟ  ಆಯುಷ್ಯವನ್ನು  ಇದ್ದಷ್ಟು  ಕಾಲ  ಉಳಿದ  ಮಕ್ಕಳ  ಜೊತೆ  ಬಾಳಿ  ಬದುಕುವುದೇ  ಪೂಜೆ  ಎಂಬ  ಬುಧ್ಧಿ  ಯಾಕೆ  ಬರಬಾರದು  ನಮಗೆ ?